Thursday, 12th December 2024

Jashimuddin Rahmani: ಪಶ್ಚಿಮ ಬಂಗಾಳವನ್ನು ಮೋದಿ ಆಡಳಿತದಿಂದ ಮುಕ್ತಗೊಳಿಸಿ; ನಾಲಗೆ ಹರಿಬಿಟ್ಟ ಬಾಂಗ್ಲಾ ಭಯೋತ್ಪಾದಕ

Jashimuddin Rahmani

ನವದೆಹಲಿ: ನೆರೆಯ ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆ ದಿನೇ ದಿನೆ ಭಾರತಕ್ಕೆ ತಲೆನೋವಾಗಿ ಪರಿಣಿಸಿದೆ. ಇದೀಗ ಬಾಂಗ್ಲಾದೇಶದ ಅಲ್-ಖೈದಾ ಸಂಯೋಜಿತ ಭಯೋತ್ಪಾದಕ ಸಂಘಟನೆಯಾದ ಅನ್ಸಾರುಲ್ಲಾ ಬಾಂಗ್ಲಾ ಟೀಮ್‌ (Ansarullah Bangla Team-ABT) ಮುಖ್ಯಸ್ಥ ಜಶಿಮುದ್ದೀನ್ ರಹ್ಮಾನಿ (Jashimuddin Rahmani) ಬಾಲ ಬಿಚ್ಚಿದ್ದು, ಪಶ್ಚಿಮ ಬಂಗಾಳವನ್ನು ಮೋದಿ ಆಡಳಿತದಿಂದ ಹೊರಗಿಟ್ಟು, ಸ್ವತಂತ್ರ ರಾಜ್ಯವನ್ನಾಗಿ ಘೋಷಿಸುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee)ಗೆ ಸಲಹೆ ನೀಡಿದ್ದಾನೆ. ಈತನ ಈ ವೀಡಿಯೊ ಇದೀಗ ಭಾರಿ ವೈರಲ್‌ ಆಗಿದೆ.

ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಜಶಿಮುದ್ದೀನ್ ರಹ್ಮಾನಿ ಜೈಲಿನಿಂದ ಬಿಡುಗಡೆ ಹೊಂದಿದ್ದಾನೆ. ʼಸ್ವತಂತ್ರ ಕಾಶ್ಮೀರʼಕ್ಕಾಗಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಸಹಾಯವನ್ನು ಕೋರುತ್ತಿರುವುದೂ ಈ ವೀಡಿಯೊದಲ್ಲಿ ಕಂಡುಬಂದಿದೆ.

ವೀಡಿಯೋದಲ್ಲಿ ಏನಿದೆ?

ಈ ತಿಂಗಳ ಆರಂಭದಲ್ಲಿ ಆಸ್ಪತ್ರೆಯ ವಾರ್ಡ್‌ ಒಂದರಲ್ಲಿ ಚಿತ್ರೀಕರಿಸಲಾದ ಈ ವೀಡಿಯೊದಲ್ಲಿ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಆಶ್ರಯ ನೀಡಿದ ಕಾರಣಕ್ಕೆ ಜಶಿಮುದ್ದೀನ್ ರಹ್ಮಾನಿ ಭಾರತಕ್ಕೆ ಎಚ್ಚರಿಕೆ ನೀಡಿದ್ದಾನೆ. ಇದೇ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೋದಿ ಆಡಳಿತದಿಂದ ಪಶ್ಚಿಮ ಬಂಗಾಳವನ್ನು ಮುಕ್ತಗೊಳಿಸಿ ಸ್ವಾತಂತ್ರ್ಯವನ್ನು ಘೋಷಿಸಬೇಕು ಎಂದು ನಾಲಗೆ ಹರಿಬಿಟ್ಟಿದ್ದಾನೆ.

ʼʼಬಾಂಗ್ಲಾದೇಶ ಸಿಕ್ಕಿಂ ಮತ್ತು ಭೂತಾನ್‌ ಥರ ಅಲ್ಲ. ಇದು 18 ಕೋಟಿ ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶ. ಇದು ನಮ್ಮ ಪವಿತ್ರ ಭೂಮಿʼʼ ಎಂದು ಹೇಳಿದ್ದಾನೆ. ಶೇಕ್‌ ಹಸೀನಾ ಅವರನ್ನು ದೇಶದಿಂದ ಪಲಾಯನ ಮಾಡಿದ್ದು ದೊಡ್ಡ ಕ್ರಾಂತಿ ಎಂದು ಆತ ಬಣ್ಣಿಸಿದ್ದಾನೆ. “ಕಾಶ್ಮೀರಕ್ಕೆ ಸ್ವಾತಂತ್ರ್ಯವನ್ನು ಸ್ವಾಗತಿಸಲು ಸಿದ್ಧವಾಗುವಂತೆ ಹೇಳಿ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಒಟ್ಟಾಗಿ ಕಾಶ್ಮೀರಕ್ಕೆ ಸ್ವಾತಂತ್ರ್ಯ ಪಡೆಯಲು ಸಹಾಯ ಮಾಡುತ್ತವೆ. ನಾವು ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡುತ್ತೇವೆ” ಎಂದು ಸವಾಲು ಹಾಕಿದ್ದಾನೆ.

ಯಾರು ಈ ಜಶಿಮುದ್ದೀನ್ ರಹ್ಮಾನಿ?

ಬಾಂಗ್ಲಾದೇಶದಲ್ಲಿ ಮಿಲಿಟರಿ ಬೆಂಬಲಿತ ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಂಡ ವಾರಗಳ ನಂತರ ಬ್ಲಾಗರ್‌ನನ್ನು ಕೊಲೆ ಮಾಡಿದ ಆರೋಪದ ಮೇಲೆ 5 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ರಹ್ಮಾನಿಯನ್ನು ಆಗಸ್ಟ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಅಲ್-ಖೈದಾ ಇಂಡಿಯನ್‌ ಸಬ್‌ಕಂಟಿನೆಂಟ್‌ (AQIS)ನೊಂದಿಗೆ ಈತ ನಿಕಟ ಸಂಬಂಧ ಹೊಂದಿದ್ದಾನೆ. ಸದ್ಯ ಭಾರತ ಅತನ ನಡೆಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಭಾರತ ವಿರೋಧಿ ಹೇಳಿಕೆ ಮೂಲಕ ದೇಶದ ಭದ್ರತೆಗೆ ಬೆದರಿಕೆ ಹುಟ್ಟು ಹಾಕಿರುವ ರಹ್ಮಾನಿ, ಅಲ್-ಖೈದಾ ಮತ್ತು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್ಇಟಿ)ಯೊಂದಿಗೆ ಸಂಪರ್ಕ ಹೊಂದಿರುವುದು ಕಳವಳಕ್ಕೆ ಕಾರಣವಾಗಿದೆ. ಸದ್ಯ ಆತನ ವೀಡಿಯೊದ ವಿರುದ್ಧ ಭಾರತಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಸುದ್ದಿಯನ್ನೂ ಓದಿ: Ajit Doval Russia Visit: ದೋವಲ್‌ ಮೂಲಕ ಪುಟಿನ್‌ಗೆ ಮೋದಿ ಸಂದೇಶ ರವಾನೆ; ರಷ್ಯಾ-ಉಕ್ರೇನ್‌ ಸಮರಕ್ಕೆ ಅಂತ್ಯ ಫಿಕ್ಸ್‌?