ಮುಂಬೈ: ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ಮುಂಬೈನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ದೀರ್ಘಕಾಲದಿಂದ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದರು. ಚಿಕಿತ್ಸೆಯ ಹೊರತಾಗಿಯೂ ಕಳೆದ ಕೆಲವು ತಿಂಗಳುಗಳಿಂದ ಅನಿತಾ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಅವರು ಕ್ಯಾನ್ಸರ್ ಮೂರನೇ ಹಂತದಲ್ಲಿತ್ತು ಎಂದು ತಿಳಿದು ಬಂದಿದೆ. ನರೇಶ್ ಗೋಯಲ್ ಸಹ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿದ್ದ ನರೇಶ್ ಗೋಯಲ್ ಅವರಿಗೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿತ್ತು. ಗೋಯಲ್ ಅವರು ತಮ್ಮ ಪತ್ನಿಯ ಗಂಭೀರ ಆರೋಗ್ಯ ಸ್ಥಿತಿ ಹಾಗೂ ತಮ್ಮ ಚಿಕಿತ್ಸೆಗಾಗಿ ಮಾನವೀಯ ಆಧಾರದ ಮೇಲೆ ಜಾಮೀನು ಕೋರಿದ್ದರು.
ಅನಿತಾ ಅವರ ಪತಿ ಮತ್ತು ಇಬ್ಬರು ಮಕ್ಕಳಾದ ನಮ್ರತಾ ಮತ್ತು ನಿವಾನ್ ಅವರನ್ನು ಅಗಲಿದ್ದಾರೆ. ಗುರುವಾರ ಮುಂಬೈನಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.