Thursday, 12th December 2024

ಸಿನಿಮೀಯ ರೀತಿಯಲ್ಲಿ ಚಿನ್ನಾಭರಣ ಅಂಗಡಿ ಲೂಟಿ

ಸಾಂಗ್ಲಿ: ಸಿನಿಮ್ಯಾಟಿಕ್​ ರೀತಿಯ ದರೋಡೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. 14 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಎಗರಿಸಿದ್ದು, ಪ್ರಕರಣ ದಾಖಲಾಗಿದೆ.

ಸಾಂಗ್ಲಿ ನಗರದಲ್ಲಿ ಹಾಡಹಗಲೇ 7 ಜನರಿದ್ದ ದರೋಡೆಕೋರರ ತಂಡ ಮೀರಜ್ ರಸ್ತೆಯಲ್ಲಿರುವ ರಿಲಯನ್ಸ್ ಆಭರಣ ಮಳಿಗೆಗೆ ನುಗ್ಗಿದೆ. ಮಾರಕಾಸ್ತ್ರ, ಬಂದೂಕುಗಳನ್ನು ಹೊಂದಿದ್ದ ದುಷ್ಕರ್ಮಿಗಳು ಅಂಗಡಿಯಲ್ಲಿದ್ದ ಎಲ್ಲ ಜನರನ್ನು ಬೆದರಿಸಿ 14 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ದ್ದಾರೆ.

ಶಸ್ತ್ರಸಜ್ಜಿತ ದರೋಡೆಕೋರರು ಪೊಲೀಸ್ ಸಮವಸ್ತ್ರದಲ್ಲಿದ್ದರು. ಅಧಿಕಾರಿಗಳಂತೆ ವೇಷ ಧರಿಸಿ ಬಂದು ಕಳ್ಳತನ ಮಾಡಿದ್ದಾರೆ. ಜನರಲ್ಲಿ ಭಯ ಹುಟ್ಟಿಸಲು ದುಷ್ಕರ್ಮಿಯೊಬ್ಬ ಗುಂಡು ಹಾರಿಸಿದ್ದಾನೆ. ಇದರಿಂದ ಅಂಗಡಿಯ ಕಿಟಕಿ ಗಾಜು ಪುಡಿಪುಡಿಯಾಗಿದೆ. ಭಯಗೊಂಡ ಗ್ರಾಹಕನೊಬ್ಬ ಅಲ್ಲಿಂದ ಓಡಿ ಹೋಗಲು ಯತ್ನಿಸಿದಾಗ ಒಡೆದ ಗಾಜಿನ ಮೇಲೆ ಬಿದ್ದು ಗಾಯಗೊಂಡಿದ್ದಾರೆ.

ದರೋಡೆಕೋರರು ಕೊಳ್ಳೆಹೊಡೆಯುವ ಮೊದಲು ಆಭರಣ ಅಂಗಡಿಯಲ್ಲಿದ್ದ ನೌಕರರು ಮತ್ತು ಗ್ರಾಹಕರ ಮೇಲೆ ಹಲ್ಲೆ ನಡೆಸಿದ್ದಾರೆ. ಆಭರಣ ಮಳಿಗೆಯ ಸಿಬ್ಬಂದಿ ಮತ್ತು ಗ್ರಾಹಕರ ಬಾಯಿಗೆ ಸೆಲ್ಲೋ ಟೇಪ್ ಅಂಟಿಸಿ, ಕಿರುಚ ದಂತೆ ತಡೆದಿದ್ದರು. ಅಲ್ಲದೇ, ಬಂದೂಕು ತೋರಿಸಿ ಒತ್ತೆಯಾಳನ್ನಾಗಿ ಮಾಡಿಕೊಂಡಿದ್ದರು. ಈ ವೇಳೆ, ಅಂಗಡಿ ಸಿಬ್ಬಂದಿ ಮತ್ತು ಕೆಲ ಗ್ರಾಹಕರು ಪ್ರತಿಭಟಿಸಿದಾಗ ಬಂದೂಕು ತೋರಿಸಿ ಬೆದರಿಸಿ, ಹಲ್ಲೆ ಮಾಡಿದ್ದಾರೆ.