Friday, 22nd November 2024

ಸರ್ವೀಸ್​ ರಸ್ತೆಯಲ್ಲಿ ಯೋಗಾಭ್ಯಾಸ: ಟ್ರಕ್​ ಹರಿದು ಬಾಲಕರ ಸಾವು

ಝಾನ್ಸಿ: ಹೆದ್ದಾರಿ ಪಕ್ಕದ ಸರ್ವೀಸ್​ ರಸ್ತೆಯಲ್ಲಿ ಬೆಳಗಿನ ಹೊತ್ತು ಯೋಗಾಭ್ಯಾಸದಲ್ಲಿ ತೊಡಗಿದ್ದ ಬಾಲಕರಿಗೆ ವೇಗವಾಗಿ ಬಂದ ಟ್ರಕ್ ಗುದ್ದಿದೆ.

ಪರಿಣಾಮ ಮೂವರು ಬಾಲಕರು ದಾರುಣವಾಗಿ ಸಾವಿಗೀಡಾದರೆ. ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಮಡೋರಾ ಖುರ್ದ್ ಗ್ರಾಮದಲ್ಲಿ ದುರಂತ ನಡೆದಿದೆ.

ಟ್ರಕ್​ ಗುದ್ದಿದ ರಭಸಕ್ಕೆ ಅಭಿರಾಜ್ (12) ಮತ್ತು ಅಭಿನವ್ (14) ಸ್ಥಳದಲ್ಲೇ ಮೃತಪಟ್ಟರೆ, 21 ವರ್ಷದ ಅನುಜ್ ಅಲಿಯಾಸ್ ಭೋಲು ಎಂಬ ಯುವಕ ಝಾನ್ಸಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯು ಸಿರೆಳೆದಿದ್ದಾನೆ. ಇನ್ನುಳಿದ 9 ವರ್ಷದ ಲಕ್ಷ್ಯ, 17 ವರ್ಷದ ಸುಂದರಂ ಹಾಗೂ 14 ವರ್ಷದ ಆರ್ಯನ್ ಎಂಬ ಬಾಲಕರು ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೂಂಚ್ ಪೊಲೀಸ್ ಠಾಣಾ ವ್ಯಾಪ್ತಿಯ ಮಡೋರಾ ಖುರ್ದ್ ಗ್ರಾಮದ ಬಳಿ ಝಾನ್ಸಿ – ಕಾನ್ಪುರ್ ಹೆದ್ದಾರಿ ಹಾದು ಹೋಗಿದೆ. ಪಕ್ಕದ ಸರ್ವೀಸ್ ರಸ್ತೆಯಲ್ಲಿ ಬೆಳಗ್ಗೆ ಬಾಲಕರು ಹಾಗೂ ಗ್ರಾಮಸ್ಥರು ಯೋಗ ಮತ್ತು ವಾಕಿಂಗ್​ ಬಳಕೆ ಮಾಡುತ್ತಿದ್ದರು. ಎಂದಿನಂತೆ ಬೆಳಗ್ಗೆ 6 ಗಂಟೆ ಸುಮಾರಿಗೆ ಸಹ ಬಾಲಕರು ಹಾಗೂ ಯುವಕರ ಗುಂಪು ಸೇರಿಕೊಂಡು ಯೋಗಾಭ್ಯಾಸದಲ್ಲಿ ತೊಡಗಿದ್ದರು.

ಇದೇ ಸಂದರ್ಭದಲ್ಲಿ ಅತಿ ವೇಗದಲ್ಲಿ ಬಂದ ಟ್ರಕ್ ಡಿವೈಡರ್ ದಾಟಿ ಸರ್ವೀಸ್ ರಸ್ತೆಗೆ ನುಗ್ಗಿದೆ. ಟ್ರಕ್​ ನುಗ್ಗಿದಾಗ ಬಾಲಕರು ರಸ್ತೆಯಲ್ಲಿ ಕುಳಿತು ಯೋಗ ಮಾಡುತ್ತಿದ್ದರು ಎನ್ನಲಾಗಿದೆ. ಸುಮಾರು ಆರೇಳು ಜನರಿಗೆ ಟ್ರಕ್​ ಗುದ್ದಿಕೊಂಡು ಹೋಗಿದೆ. ಭೀಕರ ಅಪಘಾತವು ಬಾಲಕರ ಸಾವು -ನೋವಿಗೆ ಕಾರಣವಾಗಿದೆ ಎಂದು ಸ್ಥಳೀಯ ನಿವಾಸಿ ಅಭಿಷೇಕ್ ತಿಳಿಸಿದರು.