ರಾಂಚಿ: ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆ (Jharkhand Assembly Election)ಗೆ ಮುಹೂರ್ತ ನಿಗದಿಯಾಗಿದ್ದು, ರಾಜಕೀಯ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಈ ಮಧ್ಯೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ʼಇಂಡಿಯಾʼ ಮೈತ್ರಿಕೂಟದಲ್ಲಿ ಅಸಮಾಧಾನದ ಹೊಗೆ ಭುಗಿಲೆದ್ದಿದ್ದು, ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮಿತ್ರ ಪಕ್ಷ ರಾಷ್ಟ್ರೀಯ ಜನತಾ ದಳ (RJD) ಘೋಷಿಸಿದೆ. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಮಿತ್ರ ಪಕ್ಷಗಳಾದ ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (JMM)ದ ನಿಲುವಿನ ಬಗ್ಗೆ ಆರ್‌ಜೆಡಿ ಅತೃಪ್ತಿ ಹೊಂದಿದೆ. ಹೀಗಾಗಿ ಪ್ರತ್ಯೇಕವಾಗಿ ಕಣಕ್ಕಿಳಿಯುವುದಾಗಿ ಭಾನುವಾರ (ಅಕ್ಟೋಬರ್ 20) ಪಕ್ಷದ ಹಿರಿಯ ಮುಖಂಡ ಮನೋಜ್ ಝಾ (Manoj Jha) ತಿಳಿಸಿದ್ದಾರೆ.
ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ಸಿಂಹಪಾಲು ಹೊಂದಿವೆ. ಕೇವಲ 6 ಸೀಟುಗಳನ್ನು ಆರ್‌ಜೆಡಿಗೆ ಬಿಟ್ಟುಕೊಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ತೇಜಸ್ವಿ ಯಾದವ್ ಅವರ ಆರ್‌ಜೆಡಿ ಇದಕ್ಕೆ ಒಪ್ಪಿಗೆ ನೀಡಿಲ್ಲ. ʼʼನಾವು 12ರಿಂದ 13 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದೇವೆ. ಇದಕ್ಕಿಂತ ಕಡಿಮೆ ಸೀಟನ್ನು ನಾವು ಒಪ್ಪುತ್ತಿಲ್ಲ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಚಿಂತನೆ ನಡೆಸಿದ್ದೇವೆʼʼ ಎಂದು ಮನೋಜ್ ಝಾ ಹೇಳಿದ್ದಾರೆ.
#WATCH | Ranchi: On seat sharing for #JharkhandElection2024, RJD MP Manoj Kumar Jha says, "When 2019 elections were held here, our party's national president was here. With a heavy heart, he agreed for 7 seats then because he is big-hearted and said that the goal is to remove BJP… pic.twitter.com/oIBfdy8mip
— ANI (@ANI) October 20, 2024
ರಾಜ್ಯದ ಆಡಳಿತಾರೂಢ ಮಿತ್ರ ಪಕ್ಷಗಳಾದ ಕಾಂಗ್ರೆಸ್ ಮತ್ತು ಹೇಮಂತ್ ಸೊರೆನ್ ಅವರ ಜೆಎಂಎಂ 81 ಸ್ಥಾನಗಳ ಪೈಕಿ 70 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿವೆ. ಆರ್‌ಜೆಡಿಗೆ 6 ಸ್ಥಾನ ಮತ್ತು ಉಳಿದವುಗಳನ್ನು ಎಡಪಕ್ಷಕ್ಕೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜಾರ್ಖಂಡ್‌ನಲ್ಲಿ ತಮ್ಮ ಪಕ್ಷವು 18-20 ಸ್ಥಾನಗಳಲ್ಲಿ ಪ್ರಭಾವ ಹೊಂದಿದೆ ಎಂದು ಮನೋಜ್ ಝಾ ತಿಳಿಸಿದ್ದಾರೆ.
ʼʼಬಿಜೆಪಿಯನ್ನು ಸೋಲಿಸುವುದೇ ನಮ್ಮ ಏಕೈಕ ಗುರಿ. ನಾವು ʼಇಂಡಿಯಾʼ ಬಣವನ್ನು ಹಾಳುಗೆಡವುದಿಲ್ಲ. ಜಾರ್ಖಂಡ್ ಚುನಾವಣೆಯಲ್ಲಿ ನಾವು ಏಕಾಂಗಿಯಾಗಿ ಸ್ಪರ್ಧಿಸಿದರೂ, 60-62 ಸ್ಥಾನಗಳಲ್ಲಿ ʼಇಂಡಿಯಾʼ ಒಕ್ಕೂಟದ ಅಭ್ಯರ್ಥಿಗಳನ್ನು ಬೆಂಬಲಿಸುತ್ತೇವೆ” ಎಂದು ಅವರು ನುಡಿದಿದ್ದಾರೆ.
2019ರ ಫಲಿತಾಂಶ
2019ರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ 7 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 1 ಸ್ಥಾನವನ್ನು ಗೆದ್ದಿತ್ತು. ಇನ್ನು ಜೆಎಂಎಂ 43 ಕಡೆ ಸ್ಪರ್ಧಿಸಿ 30 ಕಡೆ ಗೆಲುವಿನ ನಗೆ ಬೀರಿತ್ತು. 31 ಸ್ಥಾನಗಳಲ್ಲಿ ಕಣಕ್ಕಿಳಿದಿದ್ದ ಕಾಂಗ್ರೆಸ್ 16 ಕಡೆ ಗೆಲುವಿನ ಪತಾಕೆ ಹಾರಿಸಿತ್ತು. ಮೂರು ಮೈತ್ರಿ ಪಕ್ಷಗಳು ಸೇರಿ ಒಟ್ಟು 47 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದ್ದವು. ಬಹುಮತ್ತಕ್ಕೆ ಅಗತ್ಯವಾದ ಸಂಖ್ಯಾಬಲ 41.
ಜಾರ್ಖಂಡ್‌ನಲ್ಲಿ ಎನ್‌ಡಿಎ(NDA) ಮೈತ್ರಿಕೂಟ ಸೀಟು ಹಂಚಿಕೆಯನ್ನು ಈಗಾಗಲೇ ಘೋಷಿಸಿದೆ. ಒಟ್ಟು 81 ಕ್ಷೇತ್ರಗಳಲ್ಲಿ ಬಿಜೆಪಿ 68 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಜಾರ್ಖಂಡ್‌ನಲ್ಲಿ ನವೆಂಬರ್ 13 ಮತ್ತು ನವೆಂಬರ್ 20ರಂದು 2 ಹಂತಗಳಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ನವೆಂಬರ್ 23ರಂದು ನಡೆಯಲಿದೆ. ಪ್ರಸ್ತುತ ಜಾರ್ಖಂಡ್ ವಿಧಾನಸಭೆಯ ಅವಧಿಯು 2025ರ ಜನವರಿ 5ಕ್ಕೆ ಕೊನೆಗೊಳ್ಳಲಿದೆ.
ಈ ಸುದ್ದಿಯನ್ನೂ ಓದಿ: Jharkhand Assembly Election: ಜಾರ್ಖಂಡ್ ಚುನಾವಣೆ-NDA ಸೀಟು ಹಂಚಿಕೆ ಫೈನಲ್; 68 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ