Tuesday, 12th November 2024

ಜಾರ್ಖಂಡ್ ಕಾಂಗ್ರೆಸ್‌ನ ಎಕ್ಸ್‌ ಖಾತೆಗೆ ನಿಷೇಧ

ವದೆಹಲಿ: ಜಾರ್ಖಂಡ್ ಕಾಂಗ್ರೆಸ್‌ನ ಎಕ್ಸ್‌ ಖಾತೆಯ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಖಾತೆಯನ್ನೇ ನಿಷೇಧಿಸಲಾಗಿದೆ.

ಜಾರ್ಖಂಡ್‌ ಕಾಂಗ್ರೆಸ್‌ನ ಎಕ್ಸ್ ಹ್ಯಾಂಡಲ್‌ನಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ‘ಡೀಪ್‌ಫೇಕ್ ಮಾರ್ಫ್ಡ್ ವಿಡಿಯೋ’ ಪೋಸ್ಟ್ ಮಾಡಿದ ಹಿನ್ನೆಲೆ ಕಾನೂನು ಕ್ರಮಕ್ಕೆ ಆಗ್ರಹಿಸಿದ ನಂತರ ಎಕ್ಸ್‌ ಈ ಕ್ರಮ ಕೈಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಜಾರ್ಖಂಡ್ ರಾಜ್ಯ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಸಮಿತಿ ಅಧ್ಯಕ್ಷ ಗಜೇಂದ್ರ ಸಿಂಗ್‌ಗೆ ದೆಹಲಿ ಪೊಲೀಸರು ಸಮನ್ಸ್ ಕಳುಹಿಸಿದ್ದು, ಉತ್ತರಿಸುವಂತೆ ಸೂಚಿಸಿದ್ದಾರೆ.

ಜಾರ್ಖಂಡ್ ರಾಜ್ಯ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಸಮಿತಿ ಅಧ್ಯಕ್ಷ ಗಜೇಂದ್ರ ಸಿಂಗ್‌, ನೋಟಿಸ್‌ಗೆ ತಕ್ಷಣವೇ ಪ್ರತಿಕ್ರಿಯಿಸುವುದು ಕಷ್ಟ. ಮೇ 3ರಂದು ವಿಶೇಷ ಐಟಿ ಸೆಲ್ ಮುಂದೆ ಹಾಜರಾಗುವಂತೆಯೂ ತಿಳಿಸಲಾಗಿದೆ. ಪಕ್ಷ ತನ್ನ ಕಾನೂನು ಸಲಹೆಗಾರರಿಂದ ಸಲಹೆ ಪಡೆಯುತ್ತಿದೆ. ಜಾರ್ಖಂಡ್ ಕಾಂಗ್ರೆಸ್ ಮೇಲೆ ಹೆಚ್ಚುತ್ತಿರುವ ಒತ್ತಡದಿಂದಾಗಿ ದೆಹಲಿ ಪೊಲೀಸರು ನಮ್ಮ ಖಾತೆಯನ್ನು ಹಿಡಿದಿಟ್ಟುಕೊಳ್ಳಲು ಎಕ್ಸ್‌ಗೆ ಕೇಳಿದ್ದಾರೆ ಎಂದು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಡೀಪ್ ಫೇಕ್ ವಿಡಿಯೋದ ತನಿಖೆಗೆ ಸಂಬಂಧಿಸಿದಂತೆ ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಅವರನ್ನು ದೆಹಲಿ ಪೊಲೀಸರು ಮೇ 2 ರಂದು ವಿಚಾರಣೆಗೆ ಕರೆದಿದ್ದಾರೆ.

ನಕಲಿ ವಿಡಿಯೋ ಪ್ರಕರಣದಲ್ಲಿ ದೆಹಲಿ ಪೊಲೀಸರು ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದ್ದು, ತೆಲಂಗಾಣ ಸಿಎಂಗೆ ದೆಹಲಿ ಪೊಲೀಸರು ಮತ್ತೊಮ್ಮೆ ನೋಟಿಸ್ ಕಳುಹಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಅಮಿತ್ ಶಾ ಅವರ ಎಡಿಟ್ ಮಾಡಿದ ವೀಡಿಯೊ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ ನಂತರ ದೆಹಲಿ ಪೊಲೀಸರು ಇದುವರೆಗೆ ಸುಮಾರು 20 ಜನರಿಗೆ ತನಿಖೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಿದ್ದಾರೆ .