ಜಿಂದ್: 142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಕಿರಾತಕ ಪ್ರಾಂಶುಪಾಲನಿಗೆ ಕೆಲಸದಿಂದ ಗೇಟ್‌ಪಾಸ್ ನೀಡಲಾಗಿದೆ. ಈತನ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತಿದೆ.
ಹರಿಯಾಣದ ಜಿಂದ್ ಜಿಲ್ಲೆಯ ಬಾಲಕಿಯರ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲ ಕರ್ತಾರ್ ಸಿಂಗ್ ಈ ಕೃತ್ಯ ಎಸಗಿದವನು. ಈತನನ್ನು ಸರ್ಕಾರ ಸೇವೆಯಿಂದ ವಜಾಗೊಳಿಸಿದೆ. ನ.4ರಂದು ಪೊಲೀಸರು ಆರೋಪಿ ಕರ್ತಾರ್ ಸಿಂಗ್‌ನನ್ನು ಬಂಧಿಸಿದ್ದು, ಅವನೀಗ ಜಿಂದ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈತನ ಕೃತ್ಯಗಳ ಬಗ್ಗೆ ವಿದ್ಯಾರ್ಥಿನಿಯರೇ ಮೊದಲು ಸಂಘಟಿತರಾಗಿ ಹೋರಾಟಕ್ಕಿಳಿದು ಪೊಲೀಸರ, ರಾಷ್ಟ್ರಪತಿಗಳ ಗಮನಕ್ಕೆ ತಂದಿದ್ದರು.
ಉಚ್ಚಾನಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗುಲ್ಜಾರ್ ಮಲಿಕ್ ನೇತೃತ್ವದ ಸಮಿತಿಯ ತನಿಖಾ ವರದಿಯ ಮೇಲೆ ಕಾರ್ಯನಿರ್ವಹಿಸಿದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು, ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲ ತಪ್ಪಿತಸ್ಥನೆಂದು ಕಂಡುಬಂದಿರುವುದರಿಂದ, ಆತನನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಿದ್ದಾರೆ.
ಉಚ್ಚಾನಾ ಮ್ಯಾಜಿಸ್ಟ್ರೇಟ್ ನೇತೃತ್ವದ ಪ್ರಕರಣದ ವಿಚಾರಣಾ ಸಮಿತಿಯು 390 ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದು, ಅದರಲ್ಲಿ 142 ವಿದ್ಯಾರ್ಥಿನಿ ಯರು ಸಿಂಗ್ ವಿರುದ್ಧ ಸಾಕ್ಷ್ಯ ನುಡಿದಿದ್ದಾರೆ ಎಂದು ಜಿಂದ್ ಜಿಲ್ಲಾಧಿಕಾರಿ ಮೊಹಮ್ಮದ್ ಇಮ್ರಾನ್ ರಜಾ ಳಿದ್ದಾರೆ.
ಪ್ರಾಂಶುಪಾಲ ಲೈಂಗಿಕ ಕಿರುಕುಳ ನೀಡುತ್ತಿದ್ದು, ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಲೆಯ ವಿದ್ಯಾರ್ಥಿನಿಯರೇ ಹೋರಾಟ ಆರಂಭಿಸಿ ದ್ದರು. ಅವರು ಕಳೆದ ಆಗಸ್ಟ್ 31ರಂದು ಸಹಿ ಹಾಕಿರುವ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಹರಿಯಾಣ ರಾಜ್ಯಪಾಲ, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕಳುಹಿಸಿದ್ದರು. ಇದಾದ ಬಳಿಕ ಶಾಲೆಯ ಪ್ರಾಂಶುಪಾಲನ ವಿರುದ್ಧ ಪ್ರಕರಣ ದಾಖಲಾಗಿತ್ತು.