Friday, 22nd November 2024

Jio Payment Solutions: ಆನ್‌ಲೈನ್‌ ಪಾವತಿ ಅಗ್ರಿಗೇಟರ್ ಆಗಿ ಕಾರ್ಯ ನಿರ್ವಹಿಸಲು ಜಿಯೋ ಪೇಮೆಂಟ್ ಸೊಲ್ಯೂಷನ್ಸ್‌ಗೆ ಅನುಮೋದನೆ

Jio Payment Solutions

ಮುಂಬೈ: ಬಿಲಿಯನೇರ್ ಮುಖೇಶ್ ಅಂಬಾನಿ (Mukesh Ambani) ನೇತೃತ್ವದ ರಿಲಯನ್ಸ್ ಗ್ರೂಪ್‌ನ ಜಿಯೋ ಫೈನಾನ್ಷಿಯಲ್ ಸರ್ವೀಸಸ್‌ (Jio Financial Services)ನ ಅಂಗಸಂಸ್ಥೆಯಾದ ಜಿಯೋ ಪೇಮೆಂಟ್ ಸೊಲ್ಯೂಷನ್ಸ್‌ (Jio Payment Solutions)ಗೆ ಆನ್‌ಲೈನ್‌ ಪಾವತಿ ಅಗ್ರಿಗೇಟರ್ (Online payment aggregator) ಆಗಿ ಕಾರ್ಯ ನಿರ್ವಹಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (Reserve Bank of India) ಅನುಮತಿ ನೀಡಿದೆ ಎಂದು ಜಿಯೋ ಫೈನಾನ್ಷಿಯಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಪಾವತಿ ಅಗ್ರಿಗೇಟರ್ ಎನ್ನುವುದು ಥರ್ಡ್‌ ಪಾರ್ಟಿ ಸರ್ವಿಸ್‌ ಪ್ರೊವೈಡರ್‌ ಆಗಿದ್ದು, ಇದು ಗ್ರಾಹಕರಿಗೆ ಆನ್‌ಲೈನ್‌ನಲ್ಲಿ ಪಾವತಿ ಮಾಡಲು ಮತ್ತು ವ್ಯವಹಾರಗಳನ್ನು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ. ಮಾತ್ರವಲ್ಲ ಪಾವತಿ ಅಗ್ರಿಗೇಟರ್‌ಗಳು ಗ್ರಾಹಕರಿಗೆ ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು, ಕಾರ್ಡ್‌ ರಹಿತ ಸುಲಭ ಮಾಸಿಕ ಕಂತುಗಳು, ಯುನೈಟೆಡ್ ಪೇಮೆಂಟ್ಸ್ ಇಂಟರ್‌ಫೇಸ್‌ ವರ್ಗಾವಣೆಗಳು, ಬ್ಯಾಂಕ್ ವರ್ಗಾವಣೆಗಳು, ಇ-ವ್ಯಾಲೆಟ್‌ಗಳು ಮತ್ತು ಇ-ಮ್ಯಾಂಡೇಟ್‌ಗಳಂತಹ ವಿವಿಧ ಪಾವತಿ ವಿಧಾನಗಳನ್ನು ಸ್ವೀಕರಿಸಲು ನೆರವಾಗುತ್ತವೆ.

ಅ. 28ರಿಂದ ಅನುಮೋದನೆ ಜಾರಿಗೆ ಬರಲಿದೆ. ಕಳೆದ ವರ್ಷ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್‌ನಿಂದ ಜಿಯೋ ಫೈನಾನ್ಷಿಯಲ್ ಅನ್ನು ಬೇರ್ಪಡಿಸಲಾಗಿತ್ತು. ಜಿಯೋ ಪೇಮೆಂಟ್‌ ಸೊಲ್ಯೂಷನ್ಸ್‌ ಲಿಮಿಟೆಡ್‌ಗೆ ಆರ್‌ಬಿಐ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಜಿಯೋ ಫೈನಾನ್ಶಿಯಲ್‌ ಸರ್ವಿಸಸ್‌ನ ಷೇರು ಎನ್‌ಎಸ್‌ಇಯಲ್ಲಿ ಶೇ. 3ರಷ್ಟು ವೃದ್ದಿಸಿದೆ. ಆ ಮೂಲಕ ಪ್ರತಿ ಷೇರು 325.90 ರೂ. ತಲುಪಿದೆ.

ಫೆಬ್ರವರಿಯಲ್ಲಿ ಮುಖೇಶ್ ಅಂಬಾನಿ ಅವರ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಪೇಟಿಎಂನ ವ್ಯಾಲೆಟ್ ವ್ಯವಹಾರವನ್ನು ಖರೀದಿಸಲು ಯೋಚಿಸುತ್ತಿದೆ ಎಂಬ ವರದಿಗಳನ್ನು ತಳ್ಳಿ ಹಾಕಿತ್ತು.

ರಿಲಯನ್ಸ್ ಸ್ಟ್ರಾಟೆಜಿಕ್ ಇನ್ವೆಸ್ಟ್‌ಮೆಂಟ್ಸ್ ಸಂಸ್ಥೆಯಿಂದ ಪ್ರತ್ಯೇಕವಾಗಿ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಕಳೆದ ವರ್ಷ ಆಗಸ್ಟ್‌ನಲ್ಲಿ ಸ್ಥಾಪನೆಯಾಯಿತು. ಅದೇ ತಿಂಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆಗಿತ್ತು. ಕಂಪೆನಿ ಸ್ಥಾಪನೆಯಾಗಿ 9 ತಿಂಗಳಲ್ಲಿ 1,294 ಕೋಟಿ ರೂ. ಲಾಭ ಹಾಗೂ 1,436 ಕೋಟಿ ರೂ. ಆದಾಯ ಗಳಿಸಿತ್ತು. ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಜೀವ, ಆರೋಗ್ಯ ಹಾಗೂ ಜನರಲ್ ವಿಮಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಾದ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಕಳೆದ ವರ್ಷ ಬ್ಲಾಕ್ ರಾಕ್ ಜತೆಗೆ 50:50 ಜಾಯಿಂಟ್ ವೆಂಚರ್ ನಡೆಸಿದೆ.

ಈ ಸುದ್ದಿಯನ್ನೂ ಓದಿ: EPFO ಚಂದಾದಾರರಿಗೆ ದೀಪಾವಳಿ ಸಿಹಿಸುದ್ದಿ, ಇಂದೇ ಖಾತೆಗೆ ಹಣ ಜಮಾ