Thursday, 14th November 2024

Jiribam Encounter: ಮಣಿಪುರದಲ್ಲಿ ಮತ್ತೆ ಸಂಘರ್ಷ: ಭೀಕರ ಎನ್‌ಕೌಂಟರ್‌ನಲ್ಲಿ 11 ಬಂಡುಕೋರರ ಹತ್ಯೆ

Jiribam Encounter

ಇಂಫಾಲ: ಮಣಿಪುರದ ಜಿರಿಬಾಮ್ (Manipur’s Jiribam) ಜಿಲ್ಲೆಯಲ್ಲಿ ಸೋಮವಾರ (ನ. 11) ಸಿಆರ್‌ಪಿಎಫ್‌ (CRPF) ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 11 ಬಂಡುಕೋರರು ಸಾವನ್ನಪ್ಪಿದ್ದಾರೆ. ಸಿಆರ್‌ಪಿಎಫ್‌ ಶಿಬಿರದ ಮೇಲೆ ಗಲಭೆಕೋರರು ದಾಳಿ ನಡೆಸಿದ ನಂತರ ಗುಂಡಿನ ಚಕಮಕಿ ನಡೆಯಿತು. ಮೃತರೆಲ್ಲ ಕುಕಿ ಸಮುದಾಯಕ್ಕೆ ಸೇರಿದ ಗಲಭೆಕೋರರು ಎಂದು ಮೂಲಗಳು ತಿಳಿಸಿವೆ. ಈ ವೇಳೆ ಓರ್ವ ಸಿಆರ್‌ಪಿಎಫ್‌ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಏರ್‌ಲಿಫ್ಟ್‌ ಮಾಡಿ ಆಸ್ಪತ್ರಗೆ ದಾಖಲಿಸಲಾಗಿದೆ (Jiribam Encounter).

ಕಳೆದ ವರ್ಷ ಮೇಯಿಂದ ಮಣಿಪುರದ ಇಂಫಾಲ್ ಕಣಿವೆ ಮೂಲದ ಮೈತೈ ಮತ್ತು ಪಕ್ಕದ ಗುಡ್ಡಗಾಡು ಪ್ರದೇಶದ ಕುಕಿ ಸಮುದಾಯದ ಮಧ್ಯೆ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

ರೈತರ ಮೇಲೆ ದಾಳಿ

ಸೋಮವಾರ ಬೆಳಗ್ಗೆ ಮಣಿಪುರದ ಇಂಫಾಲದ ಪೂರ್ವ ಜಿಲ್ಲೆ ಜಿರಿಬಾಮ್‌ನ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಹತ್ತಿರದ ಬೆಟ್ಟದ ತುದಿಯಿಂದ ಗಲಭೆಕೋರರು ಗುಂಡಿನ ದಾಳಿ ನಡೆಸಿದ್ದರು. ಸತತ 3ನೇ ದಿನ ನಡೆದ ದಾಳಿ ಇದಾಗಿದೆ. ಕೂಡಲೇ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಪ್ರತಿದಾಳಿ ನಡೆಸಿದವು. ಇದು ತೀವ್ರ ಮಟ್ಟದ ಗುಂಡಿನ ಚಕಮಕಿಗೆ ಕಾರಣವಾಯಿತು. ಸದ್ಯ ಗಾಯಗೊಂಡ ರೈತನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಶನಿವಾರ ಬಿಷ್ಣುಪುರ ಜಿಲ್ಲೆಯ ಸೈಟಾನ್‌ನ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ 34 ವರ್ಷದ ರೈತ ಮಹಿಳೆ ಮೇಲೆ ದಾಳಿ ನಡೆಸಿದ್ದ ಗಲಭೆಕೋರನನ್ನು ಹೊಡೆದುರುಳಿಸಲಾಗಿತ್ತು. ಭಾನುವಾರ ಇಂಫಾಲ್ ಪೂರ್ವ ಜಿಲ್ಲೆಯ ಸನಸಾಬಿ, ಸಬುಂಗ್ಖೋಕ್ ಖುನೌ ಮತ್ತು ತಮ್ನಾಪೊಕ್ಪಿ ಪ್ರದೇಶಗಳಲ್ಲಿಇದೇ ರೀತಿಯ ದಾಳಿ ನಡೆದಿದೆ. ಸಶಸ್ತ್ರ ದಾಳಿಕೋರರಯ ಜಕುರಾಧೋರ್‌ನಲ್ಲಿ ಮೈತೈ ಸಮುದಾಯಕ್ಕೆ ಸೇರಿದ 3-4 ಪಾಳುಬಿದ್ದ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ.

ಮತ್ತೆ ಭುಗಿಲೆದ್ದ ಸಂಘರ್ಷ

ಕೆಲವು ತಿಂಗಳಿಂದ ಶಾಂತವಾಗಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಸಂಘರ್ಷ ಪೀಡಿತ ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಗುರುವಾರ (ನ. 7) ರಾತ್ರಿ ಹಮಾರ್ ಸಮುದಾಯಕ್ಕೆ ಸೇರಿದ ಮೂವರು ಮಕ್ಕಳ ತಾಯಿಯನ್ನು ಅತ್ಯಂತ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆ ಮಹಿಳೆಯನ್ನು ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದು, ನಂತರ ಶವವನ್ನು ಸುಟ್ಟು ಹಾಕಿದ್ದರು. ಮೃತ ಮಹಿಳೆ ಇಲ್ಲಿನ ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಯಾಕಾಗಿ ಸಂಘರ್ಷ?

ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮೈತೈ ಮತ್ತು ಕುಕಿ ಸಮುದಾಯಗಳ ನಡುವೆ ಕಳೆದ 2 ವರ್ಷಗಳಿಂದಲೂ ಸಂಘರ್ಷ ನಡೆಯುತ್ತಿದೆ. ಭಾರತೀಯ ಸೇನೆ ಸೇರಿದಂತೆ ಭಾರೀ ಭದ್ರತಾ ಪಡೆಗಳು ಮಧ್ಯಪ್ರವೇಶ ಮಾಡಿದ್ದರೂ ಹಿಂಸಾಚಾರ ಹಾಗೂ ಸಂಘರ್ಷ ನಿಂತಿಲ್ಲ. ಗಲಭೆಗ್ರಸ್ತ ಮಣಿಪುರದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಪಕ್ಕಪಕ್ಕದ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Manipur Violence: ಮತ್ತೊಂದು ರಾಕ್ಷಸಿ ಕೃತ್ಯಕ್ಕೆ ಸಾಕ್ಷಿಯಾದ ಮಣಿಪುರ; 3 ಮಕ್ಕಳ ತಾಯಿಯನ್ನು ಗುಂಡಿಕ್ಕಿ, ಬೆಂಕಿ ಹಚ್ಚಿ ಹತ್ಯೆ