ಇಂಫಾಲ: ಮಣಿಪುರದ ಜಿರಿಬಾಮ್ (Manipur’s Jiribam) ಜಿಲ್ಲೆಯಲ್ಲಿ ಸೋಮವಾರ (ನ. 11) ಸಿಆರ್ಪಿಎಫ್ (CRPF) ಸಿಬ್ಬಂದಿಯೊಂದಿಗೆ ನಡೆದ ಎನ್ಕೌಂಟರ್ನಲ್ಲಿ 10 ಕುಕಿ ಬಂಡುಕೋರರು ಸಾವನ್ನಪ್ಪಿದ್ದು, ಮಂಗಳವಾರ (ನ. 12) ಇಬ್ಬರು ಮೈತೈ ನಾಗರಿಕರ ಮೃತದೇಹ ಪತ್ತೆಯಾಗಿದೆ. ಜತೆಗೆ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ. ʼʼಕಾಣೆಯಾದವರ ಪತ್ತೆಗಾಗಿ ಭದ್ರತಾ ಪಡೆ ಶೋಧ ಕಾರ್ಯ ನಡೆಸುತ್ತಿದೆʼʼ ಎಂದು ಐಜಿಪಿ ಐ.ಕೆ.ಮುಯಿವಾ ತಿಳಿಸಿದ್ದಾರೆ (Jiribam Encounter).
ಸೋಮವಾರ ಬಂಡುಕೋರರು ಜಕುರಾಧೋರ್ ಕರೋಂಗ್ ಪ್ರದೇಶದಲ್ಲಿ ಬೆಂಕಿ ಹಚ್ಚಿದ ಅಂಗಡಿಗಳ ಅವಶೇಷಗಳಿಂದ ಇಬ್ಬರ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ. ಮೃತರನ್ನು ಮೈತೈ ಸಮುದಾಯದ ಲೈಶ್ರಾಮ್ ಬಾಲೆನ್ ಮತ್ತು ಮೈಬಾಮ್ ಕೇಶೋ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿರಿಬಾಮ್ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿದೆ.
3 Children, 3 Women Missing After 10 Suspected Kuki Militants Killed In Encounter In Manipur's #Jiribam
— Pavan Sharma (@thepavansharma) November 12, 2024
The #Manipur Police in a press conference today said the 10 killed in the encounter had enough firepower to create chaos in the affected area in #Jiribam, near the border with… pic.twitter.com/ANdgxgm7Ct
ಪೊಲೀಸರು ಹೇಳಿದ್ದೇನು?
ʼʼಸಂಘರ್ಷ ಪೀಡಿತ ಜಿರಿಬಾಮ್ ಜಿಲ್ಲೆಯಿಂದ ಸೋಮವಾರ 13 ಮಂದಿ ನಾಪತ್ತೆಯಾಗಿದ್ದರು. ಈ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದೆ. 5 ಮಂದಿಯನ್ನು ರಕ್ಷಿಸಲಾಗಿದೆ. ಇನ್ನು ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ 6 ಮಂದಿಯ ಸುಳಿವು ಸಿಕ್ಕಿಲ್ಲ. ಈ ಪೈಕಿ 2 ವರ್ಷದ ಮಗು ಕೂಡ ಇದೆʼʼ ಎಂದು ಪೊಲೀಸರು ವಿವರಿಸಿದ್ದಾರೆ.
ಎನ್ಕೌಂಟರ್ಗೆ ಕಾರಣವೇನು?
ಶಂಕಿತ ಬಂಡುಕೋರರ ಗುಂಪು ಸೋಮವಾರ ಅಪರಾಹ್ನ 2.30ರ ಸುಮಾರಿಗೆ ಬೊರೊಬೆಕ್ರಾ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಹತ್ತಿರದಲ್ಲೇ ಇರುವ ಸಿಆರ್ಪಿಎಫ್ ಶಿಬಿರದತ್ತ ತೆರಳಿತ್ತು. ʼʼಬಂಡುಕೋರರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದವು. ಅವರು ದಾಳಿ ನಡೆಸಲು ಆಗಮಿಸುತ್ತಿದ್ದಂತೆ ಸಿಆರ್ಪಿಎಫ್ ಸಿಬ್ಬಂದಿ ಪ್ರತಿ ದಾಳಿ ನಡೆಸತೊಡಗಿದರು. ಈ ಎನ್ಕೌಂಟರ್ ಸುಮಾರು 45 ನಿಮಿಷಗಳ ಕಾಲ ಮುಂದುವರಿಯಿತು. ಪರಿಣಾಮ 10 ಬಂಡುಕೋರರು ಹತರಾಗಿದ್ದಾರೆ. ಶಂಕಿತ ಬಂಡುಕೋರರು ಹಲವು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆʼʼ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಘರ್ಷ ಭುಗಿಲೆದ್ದಿದ್ದೇಕೆ?
ನ. 7ರಂದು ಶಂಕಿತ ಮೈತೈ ಬಂಡುಕೋರರು ಹಮಾರ್ ಬುಡಕಟ್ಟು ಜನಾಂಗದ ಹಳ್ಳಿಯ ಮೇಲೆ ದಾಳಿ ನಡೆಸಿದ ಬಳಿಕ ಸಂಘರ್ಷ ಆರಂಭವಾಯಿತು. ಈ ದಾಳಿಯಲ್ಲಿ ಹಮಾರ್ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಶಂಕಿತ ಮೈತೈ ಬಂಡುಕೋರರು ಮಹಿಳೆಯ ಕಾಲಿಗೆ ಗುಂಡು ಹಾರಿಸಿ, ಅತ್ಯಾಚಾರ ಮಾಡಿ ನಂತರ ಬೆಂಕಿ ಹಚ್ಚಿದ್ದಾರೆ ಎಂದು ಆಕೆಯ ಪತಿ ಆರೋಪಿಸಿದ್ದಾರೆ. ಮೃತ ಮಹಿಳೆ ಇಲ್ಲಿನ ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಮರುದಿನ ಬಿಷ್ಣುಪುರದ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮೈತೈ ಸಮುದಾಯದ ಮಹಿಳೆಯನ್ನು ಶಂಕಿತ ಕುಕಿ ಉಗ್ರಗಾಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಆದರೆ ಕುಕಿ ಬುಡಕಟ್ಟು ಜನಾಂಗದವರು ಗುಂಡಿನ ದಾಳಿಯನ್ನು ನಿರಾಕರಿಸಿದ್ದಾರೆ. ಸದ್ಯ ಈ ಎಲ್ಲ ಕಾರಣಗಳಿಂದ ಮಣಿಪುರದಲ್ಲಿ ಮತ್ತೆ ಸಂಘರ್ಷ ಹೊತ್ತಿ ಉರಿಯುತ್ತಿದೆ.
ಈ ಸುದ್ದಿಯನ್ನೂ ಓದಿ: Manipur Violence: ಮತ್ತೊಂದು ರಾಕ್ಷಸಿ ಕೃತ್ಯಕ್ಕೆ ಸಾಕ್ಷಿಯಾದ ಮಣಿಪುರ; 3 ಮಕ್ಕಳ ತಾಯಿಯನ್ನು ಗುಂಡಿಕ್ಕಿ, ಬೆಂಕಿ ಹಚ್ಚಿ ಹತ್ಯೆ