Friday, 22nd November 2024

J&K Assembly: ಕಾಶ್ಮೀರ ವಿಧಾನಸಭೆಯಲ್ಲಿ ಭಾರೀ ಹೈಡ್ರಾಮಾ; ಸದನದ ಬಾವಿಗಿಳಿದು ಶಾಸಕರ ಫೈಟಿಂಗ್‌!

Jammu and Kashmir

ಶ್ರೀನಗರ : ಜಮ್ಮು ಕಾಶ್ಮೀರದ (Jammu and Kashmir) ವಿಧಾನಸಭೆಯಲ್ಲಿ(J&K Assembly) ಗುರುವಾರ ಹೈಡ್ರಾಮಾ ನಡೆದಿದೆ. ಆಡಳಿತ ಹಾಗೂ ವಿಪಕ್ಷಗಳ ನಡುವೆ ಗಲಾಟೆ ನಡೆದಿದ್ದುಸದಸ್ಯರು ಹೊಡೆದಾಡಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮರು ಸ್ಥಾಪನೆಗೆ ಸಂಬಂಧಿಸಿದಂತೆ ಅಂಗೀಕಾರಗೊಂಡಿರುವ ನಿರ್ಣಯ ವಿರುದ್ಧ ವಿಪಕ್ಷಗಳು ಗದ್ದಲ ಸೃಷ್ಟಿಸಿವೆ. ಈ ವೇಳೆ ಆಡಳಿತ ಮತ್ತು ವಿಪಕ್ಷ ಬಣಗಳ ನಡುವಿನ ಶಾಸಕರು ಕೈ ಕೈ ಮಿಲಾಯಿಸುವ ಮೂಲಕ ಭಾರೀ ಕೋಲಾಹಲಕ್ಕೆ ಇಡೀ ಸದನವೇ ಸಾಕ್ಷಿಯಾಯಿತು.

ನಿನ್ನೆ ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಧ್ವನಿ ಮತದ ಮೂಲಕ ಆರ್ಟಿಕಲ್ 370 ಮರುಸ್ಥಾಪನೆಯ (restore Article 370) ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಸದನ ಆರಂಭವಾಗುತ್ತಿದ್ದಂತೆ ಬುಧವಾರ ಅಂಗೀಕಾರವಾದ ನಿರ್ಣಯದ ವಿರುದ್ಧ ಬಿಜೆಪಿ ಸದಸ್ಯರು ಪ್ರತಿಭಟಿಸಿದರು. ಸರ್ಕಾರದ ಈ ನಿರ್ಣಯದ ಕುರಿತು ಬಿಜೆಪಿ ಶಾಸಕ ಹಾಗೂ ವಿಪಕ್ಷ ನಾಯಕ ಸುನಿಲ್​ ಶರ್ಮಾ ಸದನದಲ್ಲಿ ಮಾತನಾಡುತ್ತಿದ್ದಾಗ, ಅವಾಮಿ ಇತ್ತೆಹಾದ್ ಪಕ್ಷದ ನಾಯಕ ಮತ್ತು ಶಾಸಕ ಖುರ್ಷಿದ್ ಅಹಮದ್ ಆರ್ಟಿಕಲ್ 370 ಮತ್ತು 35ಎ ಅನ್ನು ಮರುಸ್ಥಾಪಿಸುವಂತೆ ಬ್ಯಾನರ್ ಪ್ರದರ್ಶಿಸಿ ಸದನದ ಬಾವಿಗಿಳಿದರು.

ಇದರಿಂದ ಕೆರಳಿದ ಬಿಜೆಪಿ ಸದಸ್ಯರು ತಾವೂ ಕೂಡ ಸದನದ ಬಾವಿಗಿಳಿದು, ಖುರ್ಷಿದ್ ಅಹಮದ್ ಕೈಯಲ್ಲಿದ್ದ ಬ್ಯಾನರ್​ ಕಸಿದು, ತುಂಡು ತುಂಡಾಗಿ ಹರಿದು ಹಾಕಿದರು. ಇದರಿಂದ ಕೆಲ ಕಾಲ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ನಂತರ ಸ್ಪೀಕರ್​​ ಅಬ್ದುಲ್​ ರಹೀಂ ಸದನವನ್ನು 15 ನಿಮಿಷ ಕಾಲ ಮುಂದೂಡಿದರು. ಕಲಾಪ ಮುಂದೂಡಿದ ಬಳಿಕವೂ ಬಿಜೆಪಿ ನಾಯಕರು ಪ್ರತಿಭಟನೆ ಮುಂದುವರೆಸಿದರು.  ಸದನದಲ್ಲಿ ಹೊಡೆದಾಟಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮೂರು ಶಾಸಕರನ್ನು ಸದನದಿಂದ ಅಮಾನತುಗೊಳಿಸಲಾಯಿತು.

‌ಪ್ರತಿಭಟನಾಕಾರರಿಗೆ ಸ್ಪೀಕರ್ , ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳಲು ವಿನಂತಿಸಿದರೂ ಸಹ ಬಿಜೆಪಿ ಸದಸ್ಯರು ಪ್ರತಿಭಟನೆಯನ್ನು ಮುಂದುವರೆಸಿದರು.ಆಗ ಸ್ಪೀಕರ್, ‘ನೀವು ನಿಯಮಗಳನ್ನು ಮೀರುತ್ತಿದ್ದೀರಿ, ಕೆಲ ಸದಸ್ಯರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ, ನಿಮ್ಮ ವರ್ತನೆ ಬೇಸರ ತರಿಸುತ್ತಿದೆ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಾಳೆಗೆ ಕಲಾಪ ಮುಂದೂಡಿದ್ದಾರೆ.

ಇದನ್ನೂ ಓದಿ : JK Special Status: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ; ವಿಧಾನಸಭೆಯಲ್ಲಿ ನಿರ್ಣಯ ಪಾಸ್‌

ಆರ್ಟಿಕಲ್ 370 ಮರುಸ್ಥಾಪನೆಯ ಬಗ್ಗೆ ಖಂಡಿಸಿದ ಬಿಜೆಪಿ ನಾಯಕಿ ಸ್ಮೃತಿ ಇರಾನಿ, ಇದು ಸಂವಿಧಾನ ಮತ್ತು ಸುಪ್ರೀಂ ಕೋರ್ಟ್‌ನ ಅಭಿಪ್ರಾಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

“ಕಾಂಗ್ರೆಸ್ ನೇತೃತ್ವದ ಮೈತ್ರಿ ಪಕ್ಷವು ಕಾಶ್ಮೀರದ ಜನರಿಗೆ ಅನ್ಯಾಯ ಮಾಡುತ್ತಿದೆ. ವಿಶೇಷ ಸ್ಥಾನ ಮಾನ ರದ್ದತಿಯ ನಂತರದಲಿತರು, ಆದಿವಾಸಿಗಳು, ಮಕ್ಕಳು ಮತ್ತು ಮಹಿಳೆಯರು ತಮ್ಮ ಹಕ್ಕನ್ನು ಮರಳಿ ಪಡೆದಿದ್ದಾರೆ. ಮತ್ತೆ ವಿಶೇಷ ಸ್ಥಾನ ಮಾನ ಜಾರಿಗೊಳಿಸುವದು ಏಕೆ? ಸರ್ಕಾರ ಭಯೋತ್ಪಾದನೆಗೆ ನೆರವಾಗುತ್ತಿದೆಯೆ? ಸುಪ್ರೀಂ ಕೋರ್ಟ್‌ ಆದೇಶಕ್ಕೂ ಬೆಲೆ ಇಲ್ಲವೇ? ಇವೆಲ್ಲಕ್ಕೂ ಗಾಂಧಿ ಕುಟುಂಬ ಉತ್ತರಿಸಬೇಕು ಎಂದು ಕಿಡಿ ಕಾರಿದ್ದಾರೆ.