Sunday, 15th December 2024

JK Election: ಕಾಶ್ಮೀರದಲ್ಲಿ ಐವರು ಬಿಜೆಪಿ ನಾಯಕರು ಶಾಸಕ ಸ್ಥಾನಕ್ಕೆ ನಾಮನಿರ್ದೇಶನ; ಕಾಂಗ್ರೆಸ್‌ ಕಿಡಿ

JK election

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣದ ವಿಧಾನಸಭಾ ಚುನಾವಣೆಯ ಫಲಿತಾಂಶ(Assembly Election result) ಇಂದು ಹೊರ ಬೀಳಲಿದೆ. ಜಮ್ಮು ಮತ್ತು ಕಾಶ್ಮೀರ(JK Election)ದಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ(Manoj Sinha) ಅವರು ಐವರು ಬಿಜೆಪಿ ನಾಯಕರನ್ನು ಶಾಸಕರಾಗಿ ನಾಮನಿರ್ದೇಶನ ಮಾಡಲಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ಬಿಜೆಪಿ ಜಮ್ಮು-ಕಾಶ್ಮೀರ ಘಟಕದ ಉಪಾಧ್ಯಕ್ಷ ಸೋಫಿ ಯೂಸೂಫ್‌ ಮಾಹಿತಿ ನೀಡಿದ್ದು,ಕೇಂದ್ರದಲ್ಲಿ ನಮ್ಮ ಸರ್ಕಾರ ಆಡಳಿತದಲ್ಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಐವರು ಬಿಜೆಪಿ ಮುಖಂಡರ ಹೆಸರನ್ನು ಶಾಸಕರನ್ನಾಗಿ ಲೆಫ್ಟಿನೆಂಟ್‌ ಗವರ್ನರ್‌ ಅವರು ನಾಮನಿರ್ದೇಶನ ಮಾಡಲಿದ್ದಾರೆ. ಇದು ಅಧಿಕೃತ ನಾಮನಿರ್ದೇಶನವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಸೋಫಿ ಯೂಸೂಫ್‌, ಬಿಜೆಪಿ ರಾಜ್ಯ ಕಾರ್ಯದರ್ಶಿ ಅಶೋಕ್ ಕೌಲ್, ಬಿಜೆಪಿ ಮಹಿಳಾ ವಿಭಾಗದ ಮಾಜಿ ರಾಜ್ಯಾಧ್ಯಕ್ಷೆ ರಜನಿ ಸೇಥಿ, ರಾಜ್ಯ ಕಾರ್ಯದರ್ಶಿ ಡಾ.ಫರೀದಾ ಖಾನ್ ಮತ್ತು ಪಕ್ಷದ ವಕ್ತಾರ ಸುನಿಲ್ ಸೇಥಿ ಅವರನ್ನು ಶಾಸಕರನ್ನಾಗಿ ಎಲ್‌ಜಿ ನಾಮನಿರ್ದೇಶನ ಮಾಡಲಿದ್ದಾರೆ.

ಇನ್ನು ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಸ್ವಂತ ಬಲದಿಂದ ಸರ್ಕಾರ ರಚಿಸಲಿದೆ. ನಮಗೆ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ (ಮೆಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ) ಅಥವಾ ಕಾಂಗ್ರೆಸ್ ಅಗತ್ಯವಿಲ್ಲ. ಬಿಜೆಪಿ ತನ್ನದೇ ಆದ ಶಕ್ತಿ ಸಾಮರ್ಥ್ಯದಿಂದ ಸರ್ಕಾರ ರಚಿಸುತ್ತದೆ ಎಂದು ಅವರು ಹೇಳಿದರು. ಸಂಖ್ಯಾಬಲಕ್ಕೆ ಸಂಬಂಧಿಸಿದಂತೆ, ಬಹುತೇಕ ಪಕ್ಷೇತರ ಅಭ್ಯರ್ಥಿಗಳು ಹಾಗೂ ಸಣ್ಣ ಪಕ್ಷಗಳು ಬಿಜೆಪಿಯೊಂದಿಗೆ ಇವೆ ಎಂದು ಅವರು ಹೇಳಿದರು.

ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಲೆಫ್ಟಿನೆಂಟ್ ಗವರ್ನರ್ ಐದು ಸದಸ್ಯರನ್ನು ನಾಮನಿರ್ದೇಶನ ಮಾಡುವ ವಿಚಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ವಿವಾದವನ್ನು ಹುಟ್ಟುಹಾಕಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಲೆಫ್ಟಿನೆಂಟ್ ಗವರ್ನರ್‌ಗೆ ಅಂತಹ ಅಧಿಕಾರವನ್ನು ನೀಡುವುದು ಜನರ ಆದೇಶದ ವಿರುದ್ಧವಾದ ಕ್ರಮ. ಇದರಿಂದ ಬಿಜೆಪಿಗೆ ಲಾಭವಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.

ಆರ್ಟಿಕಲ್ 370 ರದ್ದತಿ ನಂತರ ಕೇಂದ್ರಾಡಳಿತ ಪ್ರದೇಶವಾಗಿ ಮಾಡಲ್ಪಟ್ಟ ಜಮ್ಮು ಕಾಶ್ಮೀರದಲ್ಲಿ, 10 ವರ್ಷಗಳ ಅಂತರದ ನಂತರ ವಿಧಾನಸಭೆ ಚುನಾವಣೆಗಳು ನಡೆದಿವೆ. ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟವು ಏಕೈಕ ಅತಿ ದೊಡ್ಡ ಚುನಾವಣಾ ಪೂರ್ವ ಮೈತ್ರಿಯಾಗಿ ಹೊರಹೊಮ್ಮಲಿದೆ ಎಂದು ಊಹಿಸಲಾಗಿದೆಯಾದರೂ, ಸ್ಪಷ್ಟ ಬಹುಮತ ಯಾವ ಪಕ್ಷಕ್ಕೂ ಸಿಕ್ಕಿಲ್ಲ.

ಇನ್ನು ಈ ಬಾರಿ ಯಾವ ಪಕ್ಷವೂ ಸ್ಪಷ್ಟ ಬಹುಮತ ಪಡೆಯುವುದಿಲ್ಲ ಎಂಬುದು ಎಕ್ಸಿಟ್‌ ಪೋಲ್‌ನಲ್ಲಿ ಬಯಲಾಗುತ್ತಿದ್ದಂತೆ ಕಾಂಗ್ರೆಸ್‌-ಎನ್‌ ಸಿ ಮೈತ್ರಿ ಇದೀಗ ಪಿಡಿಪಿಯತ್ತ ಮುಖಮಾಡಿದೆ. ಸಂಭಾವ್ಯ ಮೈತ್ರಿಗಳ ಕುರಿತು ಮಾತನಾಡಿದ ಫಾರೂಕ್‌ ಅಬ್ದುಲ್ಲಾ, ಎನ್‌ಸಿ-ಕಾಂಗ್ರೆಸ್ ಮೈತ್ರಿಯು ಈ ಪ್ರದೇಶದಲ್ಲಿ ನಿರುದ್ಯೋಗ ಮತ್ತು ಪತ್ರಿಕಾ ಸ್ವಾತಂತ್ರ್ಯದಂತಹ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಪಿಡಿಪಿಯಿಂದ ಬೆಂಬಲವನ್ನು ಅಪೇಕ್ಷಿಸುತ್ತದೆ. ನಾವೆಲ್ಲರೂ ಒಂದೇ ವಿಷಯಕ್ಕಾಗಿ ಕೆಲಸ ಮಾಡಿದರೆ, ರಾಜ್ಯದ ಜನರ ಪರಿಸ್ಥಿತಿ ಸುಧಾರಣೆಗಾಗಿ, ನಿರುದ್ಯೋಗವನ್ನು ತೆಗೆದುಹಾಕುವುದು, ಕಳೆದ 10 ವರ್ಷಗಳಲ್ಲಿ ಸಂಭವಿಸಿದ ಎಲ್ಲಾ ಸಂಕಷ್ಟಗಳನ್ನು ತೆಗೆದುಹಾಕಲು ಸಾಧ್ಯ ಎಂದು ಅವರು ಹೇಳಿದ್ದಾರೆ. ಆದರೆ ಪಿಡಿಪಿ ಮಾತ್ರ ಮೈತ್ರಿ ಬಗ್ಗೆ ಒಲವು ತೋರುವಂತೆ ಕಾಣುತ್ತಿಲ್ಲ.

ಈ ಸುದ್ದಿಯನ್ನೂ ಓದಿ: Assembly Election result: ಬಹಳ ಕುತೂಹಲ ಕೆರಳಿಸಿರುವ ಹರಿಯಾಣ, ಕಾಶ್ಮೀರ ಎಲೆಕ್ಷನ್‌ ರಿಸಲ್ಟ್‌ ಇಂದು ಪ್ರಕಟ