Friday, 22nd November 2024

ಡಿ.31ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಿಕ್ಷಣ ಸಂಸ್ಥೆಗಳು ಬಂದ್

ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲಾ ಶಾಲೆ – ಕಾಲೇಜುಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಡಿಸೆಂಬರ್ 31ರವರೆಗೆ ಬಂದ್ ಆಗಲಿವೆ ಎಂದು ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.

9 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಬೇಕಾದರೆ ಶಾಲೆಗಳಿಗೆ ಭೇಟಿ ನೀಡಬಹುದು. ಆನ್‌ಲೈನ್ ಹಾಗೂ ದೂರ ಶಿಕ್ಷಣಕ್ಕೆ ಅನುಮತಿ ನೀಡಲಾಗುವುದು. ಕಂಟೇನ್‌ಮೆಂಟ್ ವಲಯಗಳಲ್ಲಿನ ಪ್ರದೇಶಗಳಲ್ಲಿ ಮಾತ್ರ ಆನ್‌ಲೈನ್ ಬೋಧನೆ, ಟೆಲಿ- ಕೌನ್ಸೆಲಿಂಗ್ ಸಂಬಂಧಿತ ಕೆಲಸಗಳಿಗಾಗಿ ಶೇ.50ರಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಶಾಲೆಗಳಿಗೆ ಬರಬಹುದು.

ಲ್ಯಾಬ್ ಅಗತ್ಯವಿರುವ ವಿಜ್ಞಾನ ಮತ್ತು ತಾಂತ್ರಿಕ ವಿಭಾಗಗಳ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾತ್ರ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬರಲು ಅನುಮತಿ ನೀಡಲಾಗುವುದು. ಶೇ.50ರಷ್ಟು ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳನ್ನು ತೆರೆಯಬಹುದು.

ಮೆರವಣಿಗೆಗಳು, ದೊಡ್ಡ ಮಟ್ಟದ ಧಾರ್ಮಿಕ ಕೂಟಗಳನ್ನು ನಿಷೇಧಿಸಲಾಗಿದೆ. ರಸ್ತೆ, ರೈಲು ಅಥವಾ ವಿಮಾನದ ಮೂಲಕ ಪ್ರಯಾಣಿಕರು ಜಮ್ಮು ಹಾಗು ಕಾಶ್ಮೀರ ಪ್ರವೇಶಿಸಲು ಯಾವುದೇ ನಿರ್ಬಂಧಗಳಿಲ್ಲ. ಆದರೆ, ಅವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೊಳಗಾಗಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.