ಶ್ರೀನಗರ: ಜಮ್ಮು-ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಇಬ್ಬರು ಯೋಧರು ಹುತಾತ್ಮರಾಗಿದ್ದು, ಓರ್ವ ಯೋಧ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.
ಶನಿವಾರ ಮಧ್ಯಾಹ್ನ ಅನಂತ್ನಾಗ್ ಜಿಲ್ಲೆಯ ಅಹ್ಲಾನ್ ಗಡೋಲ್ನ ಕೋಕರ್ನಾಗ್ ಉಪವಿಭಾಗದ ಅರಣ್ಯದಲ್ಲಿ ಆಟಿ ಟೆರರಿಸ್ಟ್ ಆಪರೇಷನ್ ನಡೆಸುವಾಗಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಸೇನೆಯ ವಿಶೇಷ ಪಡೆಗಳು , ಪ್ಯಾರಾಟ್ರೂಪರ್ಗಳು ಈ ಕಾರ್ಯಾಚರಣೆಯ ಭಾಗವಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಅರಣ್ಯದಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರು ಕಾರ್ಯಾಚರಣೆ ನಡೆಸುತ್ತಿದ್ದ ಸೇನೆ ಅವರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದು, ಸೈನಿಕರು ಪ್ರತ್ಯುತ್ತರ ನೀಡಿದ್ದಾರೆ. ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಸೇನಾ ಸಿಬ್ಬಂದಿ, ನಾಗರೀಕರು ಸೇರಿದಂತೆ ಐವರು ಗಾಯಗೊಂಡಿದ್ದು, ಗಾಯಾಳು ಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾದೆ ಇಬ್ಬರು ಯೋಧರು ಹುತಾತ್ಮರಾದರು.
ಕಾರ್ಯಾಚರಣೆ ಮುಂದುವರೆದಿದ್ದು, ಗಡೋಲ್ನ ಕೋಕರ್ನಾಗ್ ಪ್ರದೇಶದ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಸೇನೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.