Saturday, 23rd November 2024

ಜಗನ್ ಮೋಹನ್ ಹೊಸ ಸಂಪುಟ ಸಚಿವರ ಪ್ರಮಾಣ ವಚನ ನಾಳೆ

ಅಮರಾವತಿ: ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಹೊಸ ಸಂಪುಟ ಸಚಿವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ಗುರುವಾರ ಸಂಪುಟ ಸಚಿವರ ರಾಜೀನಾಮೆಯ ನಂತರ, ಜಗನ್ ಮೋಹನ್ ರೆಡ್ಡಿ ಅವರ ಹೊಸ ಸಂಪುಟ ಸೋಮವಾರ ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಲಿದೆ. ಹಿಂದಿನ ಸಂಪುಟದ ಏಳರಿಂದ 10 ಸಚಿವರನ್ನು ನೂತನ ಸಂಪುಟದಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಯುವಜನ ಶ್ರಮಿಕ ರೈತ ಕಾಂಗ್ರೆಸ್ (ವೈಎಸ್‌ಆರ್ ಕಾಂಗ್ರೆಸ್) ಪಕ್ಷದ ಮುಖ್ಯಸ್ಥರಾಗಿ ತಮ್ಮ ಸಂಪುಟದ ರಾಜೀನಾಮೆಯನ್ನು ‘ಸಂತೋಷದಿಂದ’ ಸ್ವಾಗತಿಸಿ ದರು. ಅವರು 2024 ರಲ್ಲಿ ಮುಂಬರುವ ರಾಜ್ಯ ಚುನಾವಣೆಯ ಪೂರ್ವ ಸಿದ್ಧತೆಯ ಭಾಗವಾಗಿ ಇದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಹೇಳಿದ್ದಾರೆ.

ಶುಕ್ರವಾರ ಮಧ್ಯಾಹ್ನ ಎಲ್ಲಾ 24 ಕ್ಯಾಬಿನೆಟ್ ಸಚಿವರು ಆಂಧ್ರಪ್ರದೇಶ ಸಚಿವಾಲಯದಲ್ಲಿ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಮೂಲಗಳ ಪ್ರಕಾರ ಹೊಸ ಸಚಿವರು ಏ.11 ರಂದು ಪ್ರಮಾಣ ವಚನ ಸ್ವೀಕರಿಸ ಲಿದ್ದಾರೆ. ಸಂಪುಟದಿಂದ ಕೈಬಿಡಲಾದ 19 ಸಚಿವರ ಅಂತಿಮ ಪಟ್ಟಿಯನ್ನು ಸಿಎಂ ಜಗನ್ ರೆಡ್ಡಿ ಬುಧವಾರ ರಾಜ್ಯಪಾಲರಿಗೆ ಹಸ್ತಾಂತರಿಸಿದ್ದಾರೆ.

ಪ್ರಸ್ತುತ ಸಚಿವ ಸಂಪುಟದಲ್ಲಿ ಐವರು ಉಪ ಮುಖ್ಯಮಂತ್ರಿಗಳಿದ್ದು, ರಾಜ್ಯದಲ್ಲಿ ಜಾತಿ ಸಮತೋಲನನ್ನು ಸಾಧಿಸುವ ತಂತ್ರದ ಭಾಗವಾಗಿ ರೆಡ್ಡಿ ಅವರು ಐದು ಹೊಸ ಉಪ ಮುಖ್ಯಮಂತ್ರಿಗಳನ್ನು ಹೊಂದುವ ಸಾಧ್ಯತೆಯಿದೆ. ಪ್ರಸ್ತುತ, ಐದು ಉಪ ಮುಖ್ಯಮಂತ್ರಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿ, ಅಲ್ಪಸಂಖ್ಯಾತ ಮತ್ತು ಕಾಪು ಸಮುದಾಯಗಳನ್ನು ಪ್ರತಿನಿಧಿಸುತ್ತಿದ್ದಾರೆ.