ಹರಿಯಾಣದಲ್ಲಿ (Haryana) ತೀವ್ರವಾಗಿರುವ ನಿರುದ್ಯೋಗದ (Job Crisis) ಸಂಕೇತ ಎನ್ನುವಂತೆ ಸುಮಾರು 46,000ಕ್ಕೂ ಹೆಚ್ಚು ಪದವೀಧರ ಮತ್ತು ಸ್ನಾತಕೋತ್ತರ ಪದವೀಧರರು ಪೌರಕಾರ್ಮಿಕ (sweeper post) ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ತಿಂಗಳು ರಾಜ್ಯದ ಅಸೆಂಬ್ಲಿ ಚುನಾವಣೆ (Assembly Elections) ನಡೆಯಲಿದ್ದು, ಇದರ ಮಧ್ಯೆ ರಾಜ್ಯದಲ್ಲಿ ತೀವ್ರವಾಗಿರುವ ನಿರುದ್ಯೋಗದ ಸಮಸ್ಯೆ ಈಗ ಎಲ್ಲರ ಗಮನ ಸೆಳೆದಿದೆ.
ಹರ್ಯಾಣ ಕೌಶಲ್ ರೋಜ್ಗಾರ್ ನಿಗಮದ (HKRN) ನೈರ್ಮಲ್ಯ ಕಾರ್ಮಿಕರ ಹುದ್ದೆಗಳಿಗೆ ರಾಜ್ಯದ 46,000ಕ್ಕೂ ಹೆಚ್ಚು ಪದವೀಧರರು ಅರ್ಜಿ ಸಲ್ಲಿಸಿರುವುದು ರಾಜ್ಯ ಸಂಸ್ಥೆಯ ಅಂಕಿ ಅಂಶಗಳಿಂದ ಬಹಿರಂಗವಾಗಿದೆ.
ಗುತ್ತಿಗೆ ಸ್ವೀಪರ್ ಗಳು ಸಾರ್ವಜನಿಕ ಸ್ಥಳ, ರಸ್ತೆ ಮತ್ತು ಕಟ್ಟಡಗಳನ್ನು ಶುಚಿಗೊಳಿಸುವ ಕೆಲಸದ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಉದ್ಯೋಗವನ್ನು ಅರ್ಥಮಾಡಿಕೊಂಡು ದೃಢಿಕರಿಸುವ ಹೊಣೆಗಾರಿಕೆಗೆ ಅವರು ಸಹಿ ಮಾಡಬೇಕು. ಸರ್ಕಾರಿ ಇಲಾಖೆ, ಮಂಡಳಿ ಮತ್ತು ನಿಗಮಗಳಿಂದ ನೇಮಕಗೊಂಡ ಆಯ್ದ ಗುತ್ತಿಗೆ ಸ್ವೀಪರ್‌ಗಳು ತಿಂಗಳಿಗೆ ಸರಿಸುಮಾರು 15,000 ರೂ. ಆದಾಯ ಗಳಿಸುತ್ತಾರೆ. ಅವರಿಗೆ ತವರು ಜಿಲ್ಲೆಯೊಳಗೆ ಮಾತ್ರ ಪೋಸ್ಟಿಂಗ್ ನೀಡಲಾಗುತ್ತದೆ ಎನ್ನುತ್ತಾರೆ ಹರ್ಯಾಣ ಕೌಶಲ್ ರೋಜ್ಗಾರ್ ನಿಗಮದ ಅಧಿಕಾರಿ.
ಆಗಸ್ಟ್ 6ರಿಂದ ಸೆಪ್ಟೆಂಬರ್ 2ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಸುಮಾರು 39,990 ಪದವೀಧರರು ಮತ್ತು 6,112 ಕ್ಕೂ ಹೆಚ್ಚು ಸ್ನಾತಕೋತ್ತರ ಪದವೀಧರರು ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ.
3.95 ಲಕ್ಷಕ್ಕಿಂತಲೂ ಹೆಚ್ಚು ಮಂದಿಯಿಂದ ಅರ್ಜಿ
ಗುತ್ತಿಗೆ ವಹಿಸಿಕೊಂಡ ಏಜೆನ್ಸಿಯ ಮಾಹಿತಿಯ ಪ್ರಕಾರ 12 ನೇ ತರಗತಿಯವರೆಗಿನ ಶೈಕ್ಷಣಿಕ ಅರ್ಹತೆ ಹೊಂದಿರುವ 1,17,144 ಮಂದಿ ಕೂಡ ಅರ್ಜಿ ಸಲ್ಲಿಸಿದ್ದಾರೆ. ಉದ್ಯೋಗಕ್ಕಾಗಿ ಒಟ್ಟು 3,95,000ಕ್ಕಿಂತ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಹರಿಯಾಣದಲ್ಲಿ ಕಾಡುತ್ತಿದೆ ಉದ್ಯೋಗ ಸಮಸ್ಯೆ
ಗುತ್ತಿಗೆ ಪೌರ ಕಾರ್ಮಿಕರ ಹುದ್ದೆಗೆ ಹೆಚ್ಚಿನ ಸಂಖ್ಯೆಯ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಿರುವುದು ರಾಜ್ಯದಲ್ಲಿ ತೀವ್ರ ನಿರುದ್ಯೋಗ ಸಮಸ್ಯೆಯನ್ನು ಪ್ರತಿಬಿಂಬಿಸಿದೆ. ಕೆಲವು ಅರ್ಜಿದಾರರು ಸರ್ಕಾರಿ ಉದ್ಯೋಗದಲ್ಲಿ ಸಿಗುವ ಭದ್ರತೆಯಿಂದ ಸೆಳೆಯಲ್ಪಟ್ಟರೆ ಇತರರು ಪರ್ಯಾಯ ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಅರ್ಜಿ ಸಲ್ಲಿಸಿದರು.
ಉದ್ಯೋಗದ ಕೊರತೆಯಿಂದ ನೈರ್ಮಲ್ಯ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಿರುವುದಾಗಿ ಸಿರ್ಸಾದ ರಚನಾ ದೇವಿ ಹೇಳಿದ್ದಾರೆ. ಅವರು ನರ್ಸರಿ ಶಿಕ್ಷಕರ ತರಬೇತಿಯಲ್ಲಿ ಪದವಿ, ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ನಾಲ್ಕು ವರ್ಷಗಳಿಂದ ನಿರುದ್ಯೋಗಿಯಾಗಿದ್ದಾರೆ.
ಸಹಾಯಕ ನರ್ಸ್ ಮನೀಷಾ ಅವರ ಪತಿ ಬಿ.ಎಡ್ ಪದವೀಧರರಾದ ಡ್ಯಾನಿಶ್ ಕುಮಾರ್ ಕೂಡ ನಿರುದ್ಯೋಗದ ಕಾರಣದಿಂದ ಗುತ್ತಿಗೆ ನೈರ್ಮಲ್ಯ ಕಾರ್ಮಿಕರಾಗಿ ಕೆಲಸ ಮಾಡಲು ಮುಂದಾಗಿರುವುದಾಗಿ ಹೇಳಿದ್ದಾರೆ.
ಉದ್ಯೋಗ ಸೃಷ್ಟಿಗೆ ಕ್ರಮ
ಈ ಸಮಸ್ಯೆಯ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ನಯಾಬ್ ಸೈನಿ ಅವರ ಮಾಧ್ಯಮ ಕಾರ್ಯದರ್ಶಿಯಾಗಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಪ್ರವೀಣ್ ಅಟ್ರೆ, ಕಳೆದ ದಶಕದಲ್ಲಿ ಬಿಜೆಪಿ ಸರ್ಕಾರವು ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಸರ್ಕಾರವು 1,45,000 ನಿಯಮಿತ ಸರ್ಕಾರಿ ಉದ್ಯೋಗಗಳನ್ನು ಒದಗಿಸಿದೆ. 3,70,000 ಯುವಕರಿಗೆ ಸ್ವಯಂ ಉದ್ಯೋಗ ಮತ್ತು ಖಾಸಗಿ ವಲಯದ ಉದ್ಯೋಗಾವಕಾಶಗಳನ್ನು ಒದಗಿಸಿದೆ. ಹೆಚ್ಚುವರಿಯಾಗಿ ಹರ್ಯಾಣ ಕೌಶಲ್ ರೋಜ್ಗಾರ್ ನಿಗಮದ ಮೂಲಕ 1,20,000 ವ್ಯಕ್ತಿಗಳಿಗೆ ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಲಾಗಿದೆ ಎಂದು ತಿಳಿಸಿದರು.
Modern Anganwadi: ರಾಜ್ಯದಲ್ಲಿ ಆಧುನಿಕ ಮಾದರಿಯ 17 ಸಾವಿರ ಅಂಗನವಾಡಿ ಕೇಂದ್ರ; ಕೇಂದ್ರದಿಂದ ಮಂಜೂರಾತಿ
ನಿರುದ್ಯೋಗ ಪ್ರಮಾಣ
ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ನಡೆಸಿದ ಸಮೀಕ್ಷೆ ಪ್ರಕಾರ ಹರಿಯಾಣದ ನಗರ ಪ್ರದೇಶಗಳಲ್ಲಿ 15- 29 ವಯೋಮಾನದವರಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳವಾಗಿದೆ. 2024 ರ ಜನವರಿಯಿಂದ ಮಾರ್ಚ್ ತ್ರೈಮಾಸಿಕದಲ್ಲಿ ಶೇ. 9.5 ರಿಂದ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ ಇದು ಶೇ. 11.2ಕ್ಕೆ ಏರಿದೆ. ಮಹಿಳೆಯರ ನಿರುದ್ಯೋಗ ಪ್ರಮಾಣ ಶೇ. 13.9 ರಿಂದ ಶೇ. 17.2ಕ್ಕೆ ಏರಿಕೆಯಾಗಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.