Saturday, 14th December 2024

7.43 ಲಕ್ಷ ನಕಲಿ ಜಾಬ್ ಕಾರ್ಡ್ ರದ್ದು

ನವದೆಹಲಿ: 2022-23ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 7.43 ಲಕ್ಷಕ್ಕೂ ಹೆಚ್ಚು ನಕಲಿ ಜಾಬ್ ಕಾರ್ಡ್‌ಗಳನ್ನು ಅಳಿಸಿ ಹಾಕಲಾಗಿದೆ.

ಇದರಲ್ಲಿ 2.96 ಲಕ್ಷಕ್ಕೂ ಹೆಚ್ಚು ಕಾರ್ಡ್​ಗಳನ್ನು ಉತ್ತರ ಪ್ರದೇಶದಲ್ಲಿ ರದ್ದುಗೊಳಿಸಲಾಗಿದೆ.

ನಕಲಿ ಜಾಬ್ ಕಾರ್ಡ್‌ಗಳ ದತ್ತಾಂಶವನ್ನು ಲಿಖಿತ ರೂಪದಲ್ಲಿ ಹಂಚಿಕೊಂಡಿರುವ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ, 2022-23ರಲ್ಲಿ 7,43,457 ಮತ್ತು 2021-22ರಲ್ಲಿ 3,06,944 ನಕಲಿ ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿದೆ. ಉತ್ತರ ಪ್ರದೇಶವು ಅತಿ ಹೆಚ್ಚು ನಕಲಿ ಕಾರ್ಡ್‌ ಗಳನ್ನು ರದ್ದುಗೊಳಿಸಿದೆ. ಉತ್ತರ ಪ್ರದೇಶದಲ್ಲಿ 2021-23ರಲ್ಲಿ 67,937 ನಕಲಿ ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿದ್ದು, 2022-23ರಲ್ಲಿ 2,96,464ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

2022-23ರಲ್ಲಿ 1,14,333 ಮತ್ತು 2021-22ರಲ್ಲಿ 50,817 ಜಾಬ್ ಕಾರ್ಡ್‌ಗಳನ್ನು ಅಳಿಸುವುದರೊಂದಿಗೆ ಒಡಿಶಾ ಎರಡನೇ ಸ್ಥಾನದಲ್ಲಿದೆ. ಮಧ್ಯಪ್ರದೇಶ ದಲ್ಲಿ ಕಳೆದ ಹಣಕಾಸು ವರ್ಷದಲ್ಲಿ 27,859 ಮತ್ತು 2021-22ರಲ್ಲಿ 95,209 ನಕಲಿ ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿದೆ. ಬಿಹಾರದದಲ್ಲಿ 2021-22ರಲ್ಲಿ 80,203 ಮತ್ತು 2022-23ರಲ್ಲಿ 27,062 ಅನ್ನು ರದ್ದುಗೊಳಿಸಲಾಗಿದೆ. ಜಾರ್ಖಂಡ್‌ನಲ್ಲಿ 2022-23ರಲ್ಲಿ 70,673 ಮತ್ತು ಹಿಂದಿನ ವರ್ಷ 23,528 ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿದೆ.

ಆಂಧ್ರಪ್ರದೇಶದಲ್ಲಿ 2021-22ರಲ್ಲಿ ಅಳಿಸಲಾದ ನಕಲಿ ಜಾಬ್ ಕಾರ್ಡ್‌ಗಳ ಸಂಖ್ಯೆ 1,833 ಆಗಿದ್ದರೆ, ಕಳೆದ ಹಣಕಾಸು ವರ್ಷದಲ್ಲಿ ಇದರ ಸಂಖ್ಯೆ 46,662 ಅಂದರೆ ಬಹುಪಟ್ಟು ಹೆಚ್ಚಾಗಿದೆ. ರಾಜಸ್ಥಾನದಲ್ಲಿ 2022-23ರಲ್ಲಿ 45,646 ಮತ್ತು 2021-22ರಲ್ಲಿ 14,782 ನಕಲಿ ಜಾಬ್ ಕಾರ್ಡ್‌ಗಳನ್ನು ತೆಗೆದು ಹಾಕಲಾಗಿದೆ. ಭ್ರಷ್ಟಾಚಾರದ ಆರೋಪದ ಮೇಲೆ ಕಳೆದ ಎರಡು ವರ್ಷಗಳಿಂದ ಎಂಜಿಎನ್‌ಆರ್‌ಇಜಿಎ (MGNREGA) ಪಾವತಿಗಳು ಬಾಕಿ ಉಳಿದಿರುವ ಪಶ್ಚಿಮ ಬಂಗಾಳದಲ್ಲಿ 2022-23ರಲ್ಲಿ 5,263 ಜಾಬ್ ಕಾರ್ಡ್‌ಗಳನ್ನು ನಕಲಿ ಎಂದು ಮತ್ತು 2021-22ರಲ್ಲಿ 388 ಜಾಬ್ ಕಾರ್ಡ್‌ಗಳನ್ನು ನಕಲಿ ಅಂತ ಅಳಿಸಲಾಗಿದೆ.