Friday, 22nd November 2024

ಪೊಲೀಸರು, ಯೋಧರ ಜಂಟಿ ಕಾರ್ಯಾಚರಣೆ: ತಪ್ಪಿದ ವಿಧ್ವಂಸಕ ಕೃತ್ಯ

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿಗಳಿಂದ ನಡೆಯಬಹುದಾಗಿದ್ದ ಮತ್ತೊಂದು ವಿಧ್ವಂಸಕ ಕೃತ್ಯ ಪೊಲೀಸರು ಮತ್ತು ಯೋಧರ ಜಂಟಿ ಕಾರ್ಯಾಚರಣೆಯಿಂದ ತಪ್ಪಿದೆ.

ಈ ಸಂಬಂಧ ಪಾಕಿಸ್ತಾನ ನಿಷೇಧಿತ ಕುಖ್ಯಾತ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತೈಬಾ(ಎಲ್‍ಇಟಿ)ದ ಮೂವರು ಭಯೋತ್ಪಾದ ಕರನ್ನು ಕಾಶ್ಮೀರಿ ಕಣಿವೆಯ ರಜೌರಿ ವಲಯದಲ್ಲಿ ಬಂಧಿಸಲಾಗಿದೆ. ಪಾಕಿಸ್ತಾನ ಡ್ರೋಣ್ ಭಾರತೀಯ ಗಡಿ ಪ್ರದೇಶದ ಒಳಗೆ ಎಸೆದಿದ್ದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾಹಿತಿ ನೀಡಿದ ಪೊಲೀಸ್ ಮಹಾ ನಿರೀಕ್ಷಕ (ಐಜಿಪಿ) ದಿಲ್‍ಭಾಗ್ ಸಿಂಗ್, ರಜೌರಿ ವಲಯದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನಿ ಡ್ರೋಣ್ ಸ್ಪೋಟಕಗಳು ಮತ್ತು ಪಿಸ್ತೂಲ್-ಮ್ಯಾಗಝೈನ್‍ಗಳನ್ನು ಎಸೆದು ಪರಾರಿಯಾಗಿತ್ತು. ಇವುಗಳನ್ನು ಎತ್ತಿ ಕೊಳ್ಳಲು ಬಂದಿದ್ದ ಕಾಶ್ಮೀರದ ಮೂವರು ಲಷ್ಕರ್ ಉಗ್ರಗಾಮಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಕಳೆದ ಒಂದು ವಾರದಲ್ಲಿ ಅವಳಿ ನಗರಗಳಾದ ರಜೌರಿ ಮತ್ತು ಪೂಂಚ್ ಜಿಲ್ಲೆಯಲ್ಲಿ ನಡೆದ ಎರಡನೇ ಮಹತ್ವದ ಕಾರ್ಯಾ ಚರಣೆಯಾಗಿದೆ. ಪೂಂಚ್‍ನಲ್ಲಿ ಭದ್ರತಾಪಡೆಗಳು ಉಗ್ರರ ಅಡುಗುದಾಣವನ್ನು ಭೇದಿಸಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು.