Friday, 22nd November 2024

ಜೋಶಿಮಠ: ಹಲವೆಡೆ ಬಿರುಕು, ಕುಸಿದುಬಿದ್ದ ದೇವಸ್ಥಾನ

ಜೋಶಿಮಠ: ಹಿಮಾಲಯದ ತಪ್ಪಲಿನ ರಾಜ್ಯ ಉತ್ತರಾಖಂಡದ ಜೋಶಿಮಠ ಎಂಬ ಒಂದಿಡೀ ಪ್ರದೇಶದ ಹಲವೆಡೆ ಬಿರುಕು ಕಾಣಿಸಿಕೊಂಡ ಕುರಿತು ವರದಿ ಯಾದ ಬೆನ್ನಲ್ಲೇ ದೇವಸ್ಥಾನ ಕುಸಿದುಬಿದ್ದಿದೆ.

ಜೋಶಿಮಠದ ಹಲವು ರಸ್ತೆಗಳು ಮತ್ತು 500ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಮೂಡಿರುವ ಹಿನ್ನೆಲೆ ದೇವಸ್ಥಾನ ಕುಸಿದು ಬಿದ್ದ ಸುದ್ದಿಯು ಭೀತಿಯನ್ನು ಹೆಚ್ಚಿಸಿದೆ. ದೇವಸ್ಥಾನವು ಕಳೆದ 15 ದಿನಗಳಿಂದ ಬಿರುಕು ಬಿಟ್ಟ ಸ್ಥಿತಿಯಲ್ಲಿತ್ತು. ಕುಸಿದು ಬೀಳುವಾಗ ದೇವಸ್ಥಾನದ ಆಸುಪಾಸಿನಲ್ಲಿ ಯಾರೂ ಇರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಮುನ್ನೆಚ್ಚರಿಕೆಯ ಕ್ರಮವಾಗಿ ವಿಪತ್ತು ನಿಗ್ರಹ ದಳವು ಸುಮಾರು 50ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಿದೆ.

ವಿಷ್ಣು ಪ್ರಯಾಗ ಜಲ ವಿದ್ಯುತ್‌ ಕಾಮಗಾರಿ ಸಿಬ್ಬಂದಿಗಳು ನೆಲೆಸಿರುವ 60ಕ್ಕೂ ಹೆಚ್ಚು ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ವಿಪತ್ತು ನಿಗ್ರಹ ದಳದ ನಿರ್ದೇಶಕ ಪಂಕಜ್‌ ಚೌಹಾಣ್‌ ತಿಳಿಸಿದ್ದಾರೆ.