ಜೌನ್ಪುರ: ಜೌನ್ಪುರ ಜಿಲ್ಲೆಯ ಶಹಗಂಜ್ ಪ್ರದೇಶದಲ್ಲಿ ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸಬರ್ಹಾದ್ ಗ್ರಾಮದ ಅಶುತೋಷ್ ಶ್ರೀವಾಸ್ತವ (43)ಕೊಲೆಯಾದ ಪತ್ರಕರ್ತ.
ಇಮ್ರಂಗಂಜ್ ಮಾರುಕಟ್ಟೆಗೆ ಹೋಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಜೌನ್ಪುರ್-ಶಾಹ್ಗಂಜ್ ರಸ್ತೆಯ ಸಮೀಪವಿರುವ ಛೇದಕದಲ್ಲಿ ಗುಂಡು ಹಾರಿಸಿದ್ದಾರೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಅಜಿತ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಶ್ರೀವಾಸ್ತವ ಅವರು ಒಂದು ತಿಂಗಳ ಹಿಂದೆ ಶಹಗಂಜ್ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಪತ್ರ ಬರೆದು ರಕ್ಷಣೆಗಾಗಿ ವಿನಂತಿಸಿದ್ದರು. ಆದರೆ ಪೊಲೀಸರು ಅವರ ಮನವಿಗೆ ಗಮನ ಕೊಡಲಿಲ್ಲ ಎಂದು ಕುಟುಂಬದ ಮೂಲಗಳು ಆರೋಪಿಸಿದೆ.
ಹತ್ಯೆ ಹಿನ್ನೆಲೆಯಲ್ಲಿ ಸ್ಥಳೀಯ ಜನರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಕಠಿಣ ಕ್ರಮದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು. ಶ್ರೀವಾಸ್ತವ ಅವರು ಈ ಪ್ರದೇಶದಲ್ಲಿ ನಡೆಯುತ್ತಿದ್ದ ಗೋಹತ್ಯೆ ವಿರುದ್ಧ ಲೇಖನ ಬರೆಯುತ್ತಿದ್ದರು ಎಂದು ಸ್ಥಳೀಯ ಪತ್ರಕರ್ತರು ಹೇಳಿದ್ದಾರೆ.
ಜೌನಪುರ ಪತ್ರಕರ್ತರ ಸಂಘವು ಹತ್ಯೆಯನ್ನು ಖಂಡಿಸಿದ್ದು, ಆದಷ್ಟು ಬೇಗ ಹಂತಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿದೆ. ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪೊಲೀಸರ ಅಸಡ್ಡೆ ಕಾರ್ಯವೈಖರಿಯಿಂದ ಶ್ರೀವಾಸ್ತವ್ ಹತ್ಯೆಯಾಗಿದೆ. ಇದಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರಕರ್ತರ ಸಂಘ ಒತ್ತಾಯಿಸಿದೆ.