Sunday, 15th December 2024

Joy Alukkas: ರೋಲ್ಸ್ ರಾಯ್ಸ್ ಕಾರು ಖರೀದಿಗೆ ಹೋದಾಗ ಅವಮಾನಿತರಾದರೂ ಅದನ್ನು ಖರೀದಿಸಿ ಬಹುಮಾನವಾಗಿ ಕೊಟ್ಟ ಭಾರತೀಯ ಉದ್ಯಮಿ

Joy Alukkas

ಭಾರತದ ಬಿಲಿಯನೇರ್ (Indian Billionaire ) ಉದ್ಯಮಿಯೊಬ್ಬರು  ದುಬೈನಲ್ಲಿ (dubai) ಕಾರು ಶೋ ರೂಮ್ ನಲ್ಲಿ (Rolls Royce car Showroom) ಅವಮಾನಿತರಾದರೂ ಅವರು ಅದೇ ಕಾರನ್ನು ಖರೀದಿ ಮಾಡಿ ಡ್ರಾದಲ್ಲಿ ನೀಡಿದರು. ಆ ಉದ್ಯಮಿ ಬೇರೆ ಯಾರೂ ಅಲ್ಲ ಭಾರತದ ಅತಿದೊಡ್ಡ ಆಭರಣ ಬ್ರ್ಯಾಂಡ್‌ಗಳಲ್ಲಿ ಒಂದಾದ ಜೋ ಅಲ್ಯುಕ್ಕಾಸ್‌ನ ಅಧ್ಯಕ್ಷ ಜಾಯ್ ಅಲುಕ್ಕಾಸ್ (Joy Alukkas).

67 ವರ್ಷದ ಬಿಲಿಯನೇರ್ ಜಾಯ್ ಅಲುಕ್ಕಾಸ್ ಅವರು ರೋಲ್ಸ್ ರಾಯ್ಸ್ ಕಾರು ಖರೀದಿಸಲು ಶೋರೂಮ್‌ಗೆ ಭೇಟಿ ನೀಡಿದಾಗ ಕಹಿ ಅನುಭವ ಪಡೆದರು. ಸೇಲ್ಸ್ ಮ್ಯಾನ್ ನಿಂದ ಅವಮಾನಿತರಾದರು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 2000ರಲ್ಲಿ ದುಬೈ ನಲ್ಲಿ ರೋಲ್ಸ್ ರಾಯ್ಸ್ ಕಾರು ಖರೀದಿಸಲು ಶೋರೂಮ್‌ಗೆ ಭೇಟಿ ನೀಡಿದಾಗ ಸಂಭವಿಸಿದ ಘಟನೆಯನ್ನು ನೆನಪಿಸಿಕೊಂಡರು.

ಕಾರು ಖರೀದಿ ಮಾಡಲು ಹೋದ ಅವರನ್ನು ನೋಡಿ ಮಾರಾಟ ಪ್ರತಿನಿಧಿಗಳಲ್ಲಿ ಒಬ್ಬರು ಅಲ್ಲಿರುವ ಕಾರನ್ನು ನಾನು ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಅದಕ್ಕೆ ನಾನು ರೋಲ್ಸ್ ರಾಯ್ಸ್ ಕಾರನ್ನು ನೋಡಬೇಕೆಂದು ಹೇಳಿದೆ. ಅದಕ್ಕೆ ಮಾರಾಟಗಾರ, ಇಲ್ಲ, ಇಲ್ಲ ನೀವು ಕಾರು ಖರೀದಿಸಲು ಬಯಸಿದರೆ ಮಿಟ್ಸುಬಿಷಿ ಶೋರೂಮ್‌ಗೆ ಹೋಗಿ. ಅಲ್ಲಿ ನಿಮ್ಮ ಬಜೆಟ್ ಗೆ ತಕ್ಕುದಾದ ಕಾರು ಸಿಗುತ್ತದೆ ಎಂದರು.

ಈ ವರ್ತನೆಯಿಂದ ತಾವು ಮುಜುಗರ ಅನುಭವಿಸಿರುವುದಾಗಿ ಅಲುಕ್ಕಾಸ್ ಹೇಳಿದ್ದಾರೆ. ಆದರೆ ಅವರು ಅಲ್ಲಿಂದ ವಾಪಾಸ್ ಹೊರಡುವ ಬದಲು ಕಾರನ್ನು ಖರೀದಿಸಲು ನಿರ್ಧರಿಸಿದರು.

ಈ ರೀತಿಯ ನಡವಳಿಕೆಯಿಂದ ನಾನು ನಾಚಿಕೆ ಪಡುತ್ತೇನೆ ಎಂದು ಹೇಳಿದ ಅವರು, ನಾನು ಕಾರನ್ನು ಖರೀದಿಸಲು ನಿರ್ಧರಿಸಿದೆ. ಅದೇ ಕಾರನ್ನು ಖರೀದಿಸಿದೆ ಎಂದು ಹೇಳಿದರು.

Joy Alukkas

ಐಷಾರಾಮಿ ವಾಹನ ಖರೀದಿಸಿದ ಬಳಿಕ ಇನ್ನು ಮುಂದೆ ಅದರ ಅಗತ್ಯವಿಲ್ಲ ಎಂದು ಭಾವಿಸಿ, ಯುಎಇಯಲ್ಲಿ ತಮ್ಮ ಆಭರಣ ಶೋ ರೂಮ್ ನಡೆಸುತ್ತಿದ್ದ ವಾರ್ಷಿಕ ರಾಫೆಲ್ ಡ್ರಾದಲ್ಲಿ ವಿಜೇತರಿಗೆ ರೋಲ್ಸ್ ರಾಯ್ಸ್ ಅನ್ನು ನೀಡಲು ನಿರ್ಧರಿಸಿದೆ ಎಂದು ಹೇಳಿದರು.

2001 ರಲ್ಲಿ ಪ್ರಚಾರ ಅಭಿಯಾನದಲ್ಲಿ ರೋಲ್ಸ್ ರಾಯ್ಸ್ ಅನ್ನು ಅವರು ಬಹುಮಾನವಾಗಿ ಘೋಷಿಸಿದರು. ಅಲುಕ್ಕಾಸ್ ಈ ವರ್ಷದ ಮಾರ್ಚ್‌ನಲ್ಲಿ ತನ್ನ ಸಂಗ್ರಹಕ್ಕೆ 6 ಕೋಟಿ ರೂ. ಮೌಲ್ಯದ ರೋಲ್ಸ್ ರಾಯ್ಸ್ ಕಲಿನನ್ ಅನ್ನು ಸೇರಿಸಿದರು.

ಜಾಯ್ ಅಲುಕ್ಕಾಸ್ ಯಾರು?

ಜ್ಯುವೆಲರಿ ಅಂಗಡಿಯ ಮಾಲೀಕ ಜಾಯ್ ಅಲುಕ್ಕಾಸ್ 1987 ರಲ್ಲಿ ಅಬುಧಾಬಿಯಲ್ಲಿ ಕುಟುಂಬದ ಮೊದಲ ಅಂತಾರಾಷ್ಟ್ರೀಯ ವ್ಯಾಪಾರ ಪ್ರಾರಂಭಿಸಲು ಮಧ್ಯಪ್ರಾಚ್ಯ ದೇಶಕ್ಕೆ ಪ್ರಯಾಣ ಬೆಳೆಸಿದರು. ಅನಂತರ ಅವರು ತಮ್ಮದೇ ಆದ ಜೋಯಾಲುಕ್ಕಾಸ್ ಅನ್ನು ಪ್ರಾರಂಭಿಸಲು ತಂದೆಯ ಆಭರಣ ವ್ಯಾಪಾರದಿಂದ ಬೇರ್ಪಟ್ಟರು. ಇಂದು ಭಾರತದಲ್ಲಿ 100 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದಿರುವ ಅವರು 60 ಮಳಿಗೆಗಳನ್ನು ವಿದೇಶಗಳಲ್ಲಿ ತೆರೆದಿದ್ದಾರೆ. ಚೆನ್ನೈನಲ್ಲಿ ವಿಶ್ವದ ಅತಿದೊಡ್ಡ ಚಿಲ್ಲರೆ ಚಿನ್ನಾಭರಣ ಮಳಿಗೆಗಳನ್ನು ಇದು ಹೊಂದಿದೆ.

ಫೋರ್ಬ್ಸ್ ಪ್ರಕಾರ, ಜಾಯ್ ಅಲುಕ್ಕಾಸ್ ಅವರ ನಿವ್ವಳ ಮೌಲ್ಯವು 4.4 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳು ಜೋಯಾಲುಕ್ಕಾಸ್‌ನ ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿದ್ದಾರೆ.

ಜಾಯ್ ಅಲುಕ್ಕಾಸ್ ಅವರ ಆತ್ಮಚರಿತ್ರೆ “ಸ್ಪ್ರೆಡಿಂಗ್ ಜಾಯ್” ಇತ್ತೀಚೆಗೆ ಬಿಡುಗಡೆಯಾಗಿದೆ. ಇದು ಇತರರನ್ನು ತಮ್ಮ ಕನಸುಗಳನ್ನು ಬೆನ್ನಟ್ಟಲು ಪ್ರೇರೇಪಿಸುವ ಅವರ ವಿನಮ್ರ ಪ್ರಯತ್ನವನ್ನು ವಿವರಿಸುತ್ತದೆ.