Monday, 16th September 2024

ಮಾಜಿ ನ್ಯಾಯಾಧೀಶ ನ್ಯಾ.ಗಿರೀಶ ಠಾಕೂರಲಾಲ್ ನಾನಾವತಿ ಇನ್ನಿಲ್ಲ

Judge Nanavati

ನವದೆಹಲಿ: ಸಿಖ್ ವಿರೋಧಿ(1984) ಮತ್ತು ಗೋಧ್ರಾ ದಂಗೆ(2002) ಕುರಿತು ತನಿಖೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಗಿರೀಶ ಠಾಕೂರಲಾಲ್ ನಾನಾವತಿ (86) ಅವರು ಶನಿವಾರ ಹೃದಯ ವೈಫಲ್ಯದಿಂದ ಗುಜರಾತಿನಲ್ಲಿ ನಿಧನರಾದರು.

ನಾನಾವತಿ 1958,ಫೆ.11ರಂದು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದ್ದರು. 1979,ಜು.19ರಂದು ಗುಜರಾತ ಉಚ್ಚ ನ್ಯಾಯಾಲಯದ ಕಾಯಂ ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ಅವರು,1994,ಜ.31ರಂದು ಒಡಿಸಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನೇಮಕ ಗೊಂಡಿದ್ದರು.

1994,ಸೆ.28ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ವರ್ಗಾವಣೆ ಗೊಂಡಿದ್ದರು. 1995,ಮಾ.6ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಪದೋನ್ನತಿಗೊಂಡಿದ್ದ ಅವರು 2000,ಫೆ.16ರಂದು ಸೇವೆಯಿಂದ ನಿವೃತ್ತರಾಗಿದ್ದರು.

ನ್ಯಾ.ನಾನಾವತಿ ಮತ್ತು ನ್ಯಾ.ಅಕ್ಷಯ ಮೆಹ್ತಾ ಅವರು 2002ರ ಗೋಧ್ರೋತ್ತರ ದಂಗೆಗಳ ಕುರಿತು ತಮ್ಮ ಅಂತಿಮ ವರದಿಯನ್ನು 2014ರಲ್ಲಿ ಆಗಿನ ಗುಜರಾತ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರಿಗೆ ಸಲ್ಲಿಸಿದ್ದರು. 2002ರಲ್ಲಿ ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ದಂಗೆಗಳ ಕುರಿತು ತನಿಖೆಗಾಗಿ ನಾನಾವತಿ-ಮೆಹ್ತಾ ಆಯೋಗವನ್ನು ರಚಿಸಿದ್ದರು.

ಎನ್‌ಡಿಎ ಸರಕಾರವು 1984ರ ಸಿಖ್ ವಿರೋಧಿ ದಂಗೆಗಳ ತನಿಖೆಗಾಗಿ ನಾನಾವತಿ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿತ್ತು.