Thursday, 12th December 2024

ಅರವಕುರಿಚಿಯಿಂದ ಕೆ.ಅಣ್ಣಾಮಲೈ, ತೌಸಂಡ್​ ಲೈಟ್ಸ್​ ಕ್ಷೇತ್ರದಿಂದ ನಟಿ ಖುಷಬೂ ಸ್ಪರ್ಧೆ

ನವದೆಹಲಿ: ತಮಿಳುನಾಡು ರಾಜ್ಯದಲ್ಲಿ ಎಐಎಡಿಎಂಕೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ತರುವ ಅಪೇಕ್ಷೆ ಯಲ್ಲಿರುವ ಬಿಜೆಪಿ ಪಕ್ಷವು, 20 ಕ್ಷೇತ್ರಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. 17 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್ ಭಾನುವಾರ ಬಿಡುಗಡೆ ಮಾಡಿದ್ದಾರೆ.

ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ.ಅಣ್ಣಾಮಲೈ, ತಮ್ಮ ಸ್ವಕ್ಷೇತ್ರ ಕರೂರು ಜಿಲ್ಲೆಯ ಅರವಕುರಿಚಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಈಗಾಗಲೇ ಅರವಕುರಿಚಿಯ ಪ್ರವಾಸದಲ್ಲಿ ತೊಡಗಿದ್ದು, ವೈದ್ಯಕೀಯ ಶಿಬಿರ ಮುಂತಾದ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಮಾ.11 ರಂದು ಇಡೀ ದಿನ ಸುಮಾರು 90 ಕಿಲೋಮೀಟರ್ ಸೈಕಲ್ ಯಾತ್ರೆ ನಡೆಸಿ ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದ್ದರು.

ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ನಟಿ ಖುಷಬೂ ಸುಂದರ್ ತೌಸಂಡ್​ ಲೈಟ್ಸ್​ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಎಲ್.ಮುರುಗನ್ ಧರಂಪುರ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿದ್ದರೆ, ಹಿರಿಯ ನಾಯಕ ಹೆಚ್.ರಾಜ ಕರೈಕುಡಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

(ಕ್ಷಣ ಕ್ಷಣ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್ ಪೇಜ್ ಅನ್ನು ಲೈಕ್‌ ಮಾಡಿ.)

https://www.facebook.com/Vishwavanidaily