Sunday, 15th December 2024

ಕಬಡ್ಡಿ ಆಟಗಾರ ಧರ್ಮಿಂದರ್ ಸಿಂಗ್ ಗುಂಡಿಕ್ಕಿ ಹತ್ಯೆ

ಪಟಿಯಾಲ: ಪಂಜಾಬ್‌ನ ಪಟಿಯಾಲಾದ ವಿಶ್ವವಿದ್ಯಾಲಯದ ಹೊರಗೆ ಗುಂಪು ಘರ್ಷಣೆಯ ನಂತರ ಕಬಡ್ಡಿ ಆಟಗಾರ ಧರ್ಮಿಂದರ್ ಸಿಂಗ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪೋಲೀಸರ ಪ್ರಕಾರ, ಕೆಲವು ವೈಯಕ್ತಿಕ ದ್ವೇಷದ ಕಾರಣದಿಂದ ಸಿಂಗ್‌ಗೆ ಗುಂಡು ಹಾರಿಸಿದ್ದಾರೆ.

ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮೃತ ವ್ಯಕ್ತಿ ಮತ್ತು ಆರೋಪಿಗಳು ಇಬ್ಬರೂ ಪಟಿಯಾಲಾ ಜಿಲ್ಲೆಯ ದೌನ್ ಕಲಾನ್ ಗ್ರಾಮದ ನಿವಾಸಿಗಳು ಎಂದು ಪಟಿಯಾಲದ ಪೊಲೀಸ್ ವರಿಷ್ಠಾಧಿಕಾರಿ ಹರ್ಪಾಲ್ ಸಿಂಗ್ ಹೇಳಿದ್ದಾರೆ.

ದೌನ್ ಕಲಾನ್ ಗ್ರಾಮದ ಕಬ್ಬಡಿ ಕ್ಲಬ್ ಅಧ್ಯಕ್ಷರಾಗಿದ್ದ ಧರ್ಮಿಂದರ್ ರಾಜಕೀಯವಾಗಿಯೂ ಸಕ್ರಿಯರಾಗಿ ದ್ದರು. ಫೆಬ್ರವರಿಯಲ್ಲಿ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ, ಅವರು ಶಿರೋಮಣಿ ಅಕಾಲಿ ದಳವನ್ನು ತೊರೆದು ಘನೌರ್‌ನಲ್ಲಿ ಆಮ್ ಆದ್ಮಿ ಪಕ್ಷದ ಪರ ಪ್ರಚಾರ ಮಾಡಿದ್ದರು. ಅವರು ಮತ್ತೊಬ್ಬ ಕಬ್ಬಡಿ ಆಟಗಾರ ಗುರ್ಲಾಲ್ ಘನೌರ್‌ಗಾಗಿ ಪ್ರಚಾರ ಮಾಡಿದ್ದರು.

ನನ್ನ ಸಹೋದರ ಕಬಡ್ಡಿ ಆಟಗಾರನಾಗಿದ್ದು, ಕಬಡ್ಡಿ ಪಂದ್ಯಗಳನ್ನೂ ಆಯೋಜಿಸುತ್ತಿದ್ದ ಎಂದು ಮೃತನ ಸಹೋದರ ಹೇಳಿದ್ದಾರೆ.

ಮಾರ್ಚ್ 14 ರಂದು ಜಲಂಧರ್‌ನಲ್ಲಿ ಮತ್ತೊಬ್ಬ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ಸಿಂಗ್ ನಂಗಲ್ ಅಂಬಿಯಾನ್ ಅವರನ್ನು ನಾಲ್ವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ನಂತರ ಈ ಘಟನೆ ನಡೆದಿದೆ.