Sunday, 17th November 2024

Kailash Gahlot : ಚುನಾವಣೆಗೆ ಮುನ್ನವೇ ಆಪ್‌ಗೆ ಬಿಗ್‌ ಶಾಕ್! ಸಚಿವ ಕೈಲಾಶ್ ಗಹ್ಲೋಟ್ ರಾಜೀನಾಮೆ

Kailash Gahlot

ದೆಹಲಿ : ವಿಧಾನಸಭಾ ಚುನಾವಣೆಗೆ (Assembly Election) ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಆಮ್‌ ಆದ್ಮಿ ಪಕ್ಷಕ್ಕೆ (Aam Aadmi Party) ದೊಡ್ಡ ಆಘಾತವೊಂದು ಎದುರಾಗಿದೆ. ಆಮ್‌ ಆದ್ಮಿಯ ಹಿರಿಯ ಸಚಿವ ಕೈಲಾಶ್ ಗಹ್ಲೋಟ್ ಪಕ್ಷಕ್ಕೆ (Kailash Gahlot ) ರಾಜೀನಾಮೆ ನೀಡಿದ್ದಾರೆ. ಗೃಹ, ಸಾರಿಗೆ, ಐಟಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ದೆಹಲಿ ಸರ್ಕಾರದ ಪ್ರಮುಖ ಖಾತೆಗಳ ಉಸ್ತುವಾರಿ ವಹಿಸಿದ್ದ ಹಿರಿಯ ಸಚಿವ ಗಹ್ಲೋಟ್ ರಾಜೀನಾಮೆಯಿಂದ ಪಕ್ಷಕ್ಕೆ ಸಾಕಷ್ಟು ನಷ್ಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಉದ್ದೇಶಿಸಿ ಅವರು ತಮ್ಮ ರಾಜಿನಾಮೆ ಪತ್ರವನ್ನು ಬರೆದಿದ್ದು, ಆಮ್‌ ಆದ್ಮಿ ಪಕ್ಷ ಒಳಗಿನಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಉಲ್ಲೇಖಿಸಿದ್ದಾರೆ. ರಾಜಕೀಯ ಮಹತ್ವಾಕಾಂಕ್ಷೆಗಳು, ನಮ್ಮ ಬದ್ಧತೆಯನ್ನು ಕುಂದಿಸಿವೆ. ಅಂದುಕೊಂಡ ಹಾಗೆ ಕೆಲಸ ಮಾಡಲು ಆಗುತ್ತಿಲ್ಲ. ಜನರ ನಿರೀಕ್ಷೆಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿದ್ದಾರೆ. ಉದಾಹರಣೆಯೊಂದಿಗೆ ವಿವರಿಸಿದ ಅವರು ಯಮುನಾ ನದಿಯ ಬಗ್ಗೆ ಉಲ್ಲೇಖ ಮಾಡಿದ್ದಾರೆ. ನಾವು ಶುದ್ಧ ನದಿಯಾಗಿ ಮಾರ್ಪಾಡು ಮಾಡುತ್ತೇವೆ ಎಂದು ಭರವಸೆ ನೀಡಿದ್ದೆವು, ಆದರೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಮೊದಲಿಗಿಂತಲೂ ಯಮುನಾ ನದಿ ಈಗ ಮತ್ತಷ್ಟು ಕಲುಷಿತವಾಗಿದೆ ಎಂದು ಅವರು ಹೇಳಿದ್ದಾರೆ.

ಅರವಿಂದ ಕೇಜ್ರಿವಾಲ್‌ ವಿರುದ್ಧವೂ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಶೀಶ್‌ ಮಹಲ್‌ ಹಗರಣದಿಂದ ಪಕ್ಷಕ್ಕೆ ಮುಜುಗರವಾಗಿದೆ. ಆಮ್‌ ಆದ್ಮಿ ಪಕ್ಷವನ್ನು ಜನರು ನಂಬುವುದಿಲ್ಲ. ದಿಲ್ಲಿ ಸರಕಾರವು ತನ್ನ ಬಹುಪಾಲು ಸಮಯವನ್ನು ಕೇಂದ್ರದೊಂದಿಗೆ ಹೋರಾಡಿದರೆ ದಿಲ್ಲಿಯ ನಿಜವಾದ ಪ್ರಗತಿ ಸಾಧ್ಯವಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ” ಎಂದು ಅವರು ಹೇಳಿದ್ದಾರೆ.

ಮುಂದುವರಿದು, “ನಾನು ದೆಹಲಿಯ ಜನರಿಗೆ ಸೇವೆ ಸಲ್ಲಿಸುವ ಬದ್ಧತೆಯೊಂದಿಗೆ ನನ್ನ ಹೊಸ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸುತ್ತೇನೆ. ನನಗೆ ಎಎಪಿಯಿಂದ ಹಿಂದೆ ಸರಿಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ :AAP Leader Shot: ಆಪ್‌ ನಾಯಕನ ಮೇಲೆ ಅಕಾಲಿದಳ ಮುಖಂಡನಿಂದ ಫೈರಿಂಗ್‌; ಪಂಜಾಬ್‌ನಲ್ಲಿ ಭಾರೀ ಹೈಡ್ರಾಮಾ!

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರರು ಕೈಲಾಶ್‌ ಗಹ್ಲೋಟ್ ಅವರು ಸರಿಯಾದ ನಿರ್ಧಾರವನ್ನು ಕೈಗೊಂಡಿದ್ದಾರೆ. ಆಮ್‌ ಆದ್ಮಿ ಪಕ್ಷ ಎಲ್ಲಾ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ.