ಭೋಪಾಲ್: ಮಧ್ಯ ಪ್ರದೇಶ ಸರ್ಕಾರದ ಸಚಿವೆ ಇಮರ್ತಿ ದೇವಿ ಅವರನ್ನು ‘ಐಟಮ್’ ಎಂದು ಕರೆದು ಮಾಜಿ ಮುಖ್ಯಮಂತ್ರಿ, ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಭಾರಿ ವಿವಾದಕ್ಕೆ ಗುರಿಯಾಗಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಇಮರ್ತಿ ದೇವಿ ಕಾಂಗ್ರೆಸ್’ನಿಂದ ಗ್ವಾಲಿಯರ್ ನ ದಬ್ರಾ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಇದೀಗ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾಗಿ ಕಣಕ್ಕಿಳಿಯುತ್ತಿದ್ದಾರೆ.
ದಬ್ರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ರಾಜೆ ಪರ ಮತ ಯಾಚನೆ ಮಾಡುತ್ತಾ ಮಾತನಾಡಿದ ಕಮಲ್ ನಾಥ್, ನಮ್ಮ ಅಭ್ಯರ್ಥಿ ಸುರೇಶ್ ರಾಜೆ ಸರಳ ಮನುಷ್ಯ, ಆಕೆಯಂಥಲ್ಲ, ಆಕೆಯ ಹೆಸರೇನು, ನಿಮಗೆಲ್ಲಾ ಆಕೆಯ ಬಗ್ಗೆ ನನಗಿಂತ ಚೆನ್ನಾಗಿ ಗೊತ್ತಿದೆ, ನೀವೆಲ್ಲಾ ಆಕೆಯ ಬಗ್ಗೆ ಮೊದಲೇ ಸೂಚನೆ ನೀಡಬೇಕಿತ್ತು, ಎಂತಹ ಐಟಮ್ ಎಂದು ಹೇಳಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಚೌಹಾಣ್, ಹಿರಿಯ ರಾಜಕಾರಿಣಿಯಾಗಿ ಕಮಲ್ ನಾಥ್ ಅವರ ಹೇಳಿಕೆ ಆಘಾತ ವನ್ನುಂಟುಮಾಡಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಕಿಡಿ ಕಾರಿದ್ದಾರೆ.