Friday, 20th September 2024

Kangana Ranaut: ಪೊಲೀಸ್‌ ಕೇಸ್‌ ಆಗ್ತಿದ್ದಂತೆ ಭಾವಿ ಅತ್ತೆ-ಮಾವ ಓಡಿ ಹೋದ್ರು- ಮದ್ವೆ ಬಗ್ಗೆ ಕಂಗನಾ ಮಾತು

kangana

ನವದೆಹಲಿ: ಸದಾ ಒಂದಿಲ್ಲೊಂದು ವಿಚಾರ ಮೂಲಕ ಸುದ್ದಿಯಲ್ಲಿರುವ ಬಿಜೆಪಿ ಸಂಸದೆ ಕಂಗನಾ ರಣಾವತ್‌(Kangana Ranaut )ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಕ್ಸಸ್‌ಫುಲ್‌ ಸಿನಿಮಾ ವೃತ್ತಿ ಬದಕಿನ ನಡುವೆಯೇ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಅಲ್ಲೂ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿ ಸೈ ಎನಿಸಿಕೊಂಡಿರುವ ಕಂಗನಾ ಸಿನಿಮಾ ನಟನನ್ನು ಮದ್ವೆ ಆಗುತ್ತಾರೋ ಅಥವಾ ರಾಜಕಾರಣಿಯನ್ನು ವರಿಸುತ್ತಾರೋ ಎಂಬ ಚರ್ಚೆ ನಡೆಯುತ್ತಲೇ ಇದೆ. ಇದೀಗ ಆಪ್‌ ಕೀ ಅದಾಲತ್‌(Aap Ki Adalat) ಕಾರ್ಯಕ್ರಮದಲ್ಲಿ ಕಂಗನಾ ಮದುವೆ ಬಗ್ಗೆ ತಮ್ಮ ನಿಲುವನ್ನು ರಿವೀಲ್‌ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದ್ವೆ ಬಗ್ಗೆ ನಾನು ಹೇಳೋದಾದ್ರೂ ಏನಿದೆ? ಮದ್ವೆ ಬಗೆಗಿನ ನನ್ನ ನಿಲುವು ಉತ್ತಮವಾಗಿದೆ. ಪ್ರತಿಯೊಬ್ಬರಿಗೂ ಸಂಗಾತಿ ಬೇಕೇ ಬೇಕು. ಆದರೆ ನನ್ನನ್ನು ಯಾರೂ ಮದುವೆ ಆಗದಷ್ಟು ಮಟ್ಟದಲ್ಲಿ ನನ್ನ ಹೆಸರು ಹಾಳಾಗಿದೆ ಎಂದಿದ್ದಾರೆ.

ಭಾವಿ ಅತ್ತೆ-ಮಾವನ ಬಗ್ಗೆ ಜೋಕ್‌

ನನ್ನ ಮೇಲೆ ಕೇಸ್‌ ಹಾಕುತ್ತಲೇ ಇರುತ್ತಾರೆ. ನಾನು ಯಾರ ಜೊತೆ ಮಾತನಾಡಿದ್ರು ನನ್ನ ಮೇಲೆ ಕೇಸ್‌ ಬೀಳುತ್ತದೆ ಪೊಲೀಸರು ಅರೆಸ್ಟ್‌ ಮಾಡುತ್ತಾರೆ. ಇಲ್ಲವೇ ಸಮನ್ಸ್‌ ಜಾರಿಗೊಳಿಸುತ್ತಾರೆ. ಒಂದು ಬಾರಿ ಏನಾಗಿತ್ತು ಅಂದ್ರೆ ಮನೆಗೆ ಸಮನ್ಸ್ ಕಳುಹಿಸಿದ್ರು. ಆಗ ನನ್ನ ಭಾವಿ ಅತ್ತೆ ಮತ್ತು ಮಾವ ಕೂಡ ನನ್ನ ಮನೆಯಲ್ಲಿದ್ದರು ಆ ವೇಳೆ ನನಗೆ ಸಮನ್ಸ್ ಬಂದಿತು. ಸಮನ್ಸ್‌ ಬರುತ್ತಿದ್ದಂತೆ ಮದುವೆ ಗಂಡಿನ ಜೊತೆಗೆ ಅತ್ತೆ ಮಾವನೂ ಓಡಿ ಹೋದ್ರು.  ಹೀಗಾಗಿ ಇದೂ ಕೂಡ ಸೈಟ್ ಎಫೆಕ್ಟ್ ಆಗಿದೆ. ನಾನು ತಮಾಷೆ ಮಾಡುತ್ತಿಲ್ಲ ನಿಜ ಎಂದು ನಟಿ ಕಂಗನಾ ರಣಾವತ್  ತಮಾಶೆಯಾಗಿ ಹೇಳಿದ್ರು.

ಇನ್ನು ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಂಗನಾ ರಾಣಾವತ್‌ (Kangana Ranaut) ನಟಿಸಿ, ನಿರ್ದೇಶಿಸಿರುವ ಅವರ ಎಮರ್ಜೆನ್ಸಿ ಸಿನಿಮಾ  ಸೆಪ್ಟೆಂಬರ್‌ 6ಕ್ಕೆ ತೆರೆ ಕಾಣಬೇಕಿತ್ತು. ಆದರೆ ಸೆನ್ಸಾರ್‌ ಮಂಡಳಿ ಇನ್ನೂ ಪ್ರಮಾಣ ಪತ್ರ ನೀಡದಿರುವ ಹಿನ್ನಲೆಯಲ್ಲಿ ಚಿತ್ರದ ಬಿಡುಗಡೆ ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ʼʼನನ್ನ ಚಿತ್ರಕ್ಕೂ ತುರ್ತು ಪರಿಸ್ಥಿತಿ ಹೇರಲಾಗಿದೆ. ಇದು ಅತ್ಯಂತ ನೋವು ತಂದಿತ್ತಿದೆ. ಈ ದೇಶದ ಕೆಲವು ನಿಯಮಗಳ ಬಗ್ಗೆ ನಿರಾಸೆ ಹೊಂದಿದ್ದೇನೆʼʼ ಎಂದು ತಿಳಿಸಿದ್ದಾರೆ.

ಕಂಗನಾ ರಾಣಾವತ್‌ ಮೊದಲ ಬಾರಿಗೆ ಏಕಾಂಗಿಯಾಗಿ ಆ್ಯಕ್ಷನ್‌ ಕಟ್‌ ಹೇಳಿರುವ ʼಎಮರ್ಜೆನ್ಸಿʼ ಸಿನಿಮಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನ್ನಾಧರಿಸಿದೆ. ಅದರಲ್ಲಿಯೂ ಅವರು 1975 ರಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ಬಗ್ಗೆ ಈ ಚಿತ್ರ ಬೆಳಕು ಚೆಲ್ಲಲಿದೆ. ಇದೇ ಕಾರಣಕ್ಕೆ ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡುತ್ತಿದೆ.

ತುರ್ತು ಪರಿಸ್ಥಿತಿಯ ದಿನಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಇದು ವಿವಾದಾತ್ಮಕ ವಿಷಯ ಆದ್ದರಿಂದ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡುವುದು ಕಷ್ಟ ಆಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸಿನಿಮಾ ವೀಕ್ಷಿಸಿದ ಸೆನ್ಸಾರ್​ ಮಂಡಳಿ  ‘ಎಮರ್ಜೆನ್ಸಿ’ ಚಿತ್ರತಂಡಕ್ಕೆ ಒಂದಷ್ಟು ಸೂಚನೆಗಳನ್ನು ನೀಡಿದೆ. ಕೆಲವು ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಹೇಳಿದೆ. ಅಲ್ಲದೇ ಸಿನಿಮಾಗೆ ಯಾವ ಪ್ರಮಾಣ ಪತ್ರ ನೀಡಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಮಾತ್ರವಲ್ಲ ಸಿಖ್​ ಸಮುದಾಯದವರೂ ಚಿತ್ರದ ವಿರುದ್ಧ ಧ್ವನಿ ಎತ್ತಿದ್ದಾರೆ.