ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಒಂದೇ ಹಂತದಲ್ಲಿ ನ. 20ರಂದು ಮತದಾನ ನಡೆಯಲಿದ್ದು ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ಈ ಮಧ್ಯೆ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ (Kanhaiya Kumar) ಅವರು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಅವರ ಪತ್ನಿ ಅಮೃತಾ ಫಡ್ನವೀಸ್ ವಿರುದ್ದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇವೇಂದ್ರ ಫಡ್ನವೀಸ್ ಅವರು ಇತ್ತೀಚೆಗೆ ಪ್ರಸ್ತಾವಿಸಿದ ಧರ್ಮ ಯುದ್ದ ಹೇಳಿಕೆಯನ್ನು ಟೀಕಿಸುವ ಭರದಲ್ಲಿ ಕನ್ಹಯ್ಯಾ ಕುಮಾರ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ʼʼಧರ್ಮವನ್ನು ಎತ್ತಿಹಿಡಿಯುವ ಜವಾಬ್ದಾರಿ ಎಲ್ಲರ ಮೇಲಿರಬೇಕು. ಇತರರು ಧರ್ಮವನ್ನು ರಕ್ಷಿಸಲು ಕೆಲಸ ಮಾಡುತ್ತಿದ್ದರೆ, ಫಡ್ನವೀಸ್ ಅವರ ಪತ್ನಿ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ನಾಗ್ಪುರ ರ‍್ಯಾಲಿಯಲ್ಲಿ ಮಾತನಾಡಿದ ಕನ್ಹಯ್ಯಾ ಕುಮಾರ್, “ಚುನಾವಣೆಯನ್ನು ಫಢ್ನವೀಸ್ ‘ಧರ್ಮಯುದ್ಧ’ ಎಂದು ಹೇಳುತ್ತಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಿಸುವುದು ನಮ್ಮ ಧರ್ಮ. ಧರ್ಮದ ರಕ್ಷಣೆ ಕುರಿತು ಮಾತನಾಡುವ ಯಾವುದೇ ನಾಯಕರ ಮನೆಯವರು, ಮಕ್ಕಳು ಕೂಡ ಧರ್ಮ ರಕ್ಷಣೆ ಹೋರಾಟದಲ್ಲಿ ಸೇರಬೇಕು. ಧರ್ಮವನ್ನು ನಾವು ಎಲ್ಲರೂ ಒಗ್ಗೂಡಿ ರಕ್ಷಿಸೋಣ. ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುವ ಉಪ ಮುಖ್ಯಮಂತ್ರಿ ಫಡ್ನವೀಸ್ ಪತ್ನಿ ಅವರಂತಹವರಿಂದ ಧರ್ಮ ರಕ್ಷಿಸಲು ಸಾಧ್ಯವಿಲ್ಲʼʼ ಎಂದು ವಾಗ್ದಾಳಿ ನಡೆಸಿದ್ದಾರೆ.
Mumbai: Shiv Sena leader Shaina NC reacts to Congress leader Kanhaiya Kumar's remarks about Maharashtra Dy CM Devendra Fadnavis's wife, says, "Kanhaiya Kumar talks big, but what is he doing? Playing appeasement politics based on caste and religion, treating only one community as… pic.twitter.com/LuWWiAPLH7
— IANS (@ians_india) November 14, 2024
ಬಿಜೆಪಿಯಿಂದ ಖಂಡನೆ
ಸದ್ಯ ಅವರ ಈ ಹೇಳಿಕೆ ಸಂಚಲ ಸೃಷ್ಟಿಸಿದೆ. ಬಿಜೆಪಿ ಕನ್ಹಯ್ಯಾ ಕುಮಾರ್ ವಿರುದ್ಧ ತಿರುಗಿ ಬಿದ್ದಿದೆ. ಪಕ್ಷದ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಇದು ಮರಾಠಿ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ. ಕನ್ಹಯ್ಯಾ ಕುಮಾರ್ ಉಗ್ರ ಮತ್ತು ಸಂಸತ್ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರುವಿನ ಬೆಂಬಲಿಗ ಎಂದು ಟೀಕಿಸಿದ್ದಾರೆ.
ಧರ್ಮಯುದ್ಧ ಪ್ರಸ್ತಾವಿಸಿದ್ದ ದೇವೇಂದ್ರ ಫಡ್ನವೀಸ್
ಔರಂಗಾಬಾದ್‌ನಲ್ಲಿ ಪ್ರಚಾರ ನಡೆಸಿದ್ದ ದೇವೇಂದ್ರ ಫಡ್ನವೀಸ್, “ರಾಜ್ಯದಲ್ಲಿ ಈಗ ವೋಟ್ ಜಿಹಾದ್ ಪ್ರಾರಂಭವಾಗಿದೆ. ನಾವು ಅದನ್ನು ಲೋಕಸಭಾ ಚುನಾವಣೆಯಲ್ಲಿ ನೋಡಿದ್ದೇವೆ. ಈ ವೋಟ್ ಜಿಹಾದ್ ವಿರುದ್ಧ ಬಿಜೆಪಿ ‘ಧರ್ಮ ಯುದ್ಧ’ ನಡೆಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಮಹಾ ವಿಕಾಸ್ ಅಘಾಡಿ ಮೈತಿ (MVA) ವೋಟ್ ಜಿಹಾದ್ ಪ್ರಯೋಗ ಮಾಡಿದೆ. ಮುಸ್ಲಿಮರು ಹೆಚ್ಚಿರುವ 12 ಸ್ಥಾನಗಳಲ್ಲಿ ವೋಟ್ ಜಿಹಾದ್ ಘೋಷಣೆಗಳನ್ನು ಬಳಸಲಾಗಿದೆ. ಬಿಜೆಪಿ ವಿರುದ್ಧ ಮತ ಚಲಾಯಿಸಲು ಅಲ್ಲಾಹ್ನ ಹೆಸರಿನಲ್ಲಿ ಪ್ರಮಾಣ ವಚನ ಬೋಧಿಸಲು ಧಾರ್ಮಿಕ ಸ್ಥಳಗಳು ಮತ್ತು ಮುಖಂಡರನ್ನು ಬಳಸಿಕೊಳ್ಳಲಾಗಿದೆ. ಎಂವಿಎ ಈ ರೀತಿ ವೋಟ್ ಜಿಹಾದ್ ಮಾಡಿದರೆ, ‘ಧರ್ಮ ಯುದ್ಧ’ದ ಅನಿವಾರ್ಯತೆ ಇದೆʼʼ ಎಂದು ಹೇಳಿದ್ದರು.
ಮಹಾರಾಷ್ಟ್ರ ವಿಧಾನ ಸಭೆಯ 288 ಕ್ಷೇತ್ರಗಳಿಗೆ ನ. 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನ. 23ರಂದು ಫಲಿತಾಂಶ ಘೋಷಣೆಯಾಗಲಿದೆ.
ಈ ಸುದ್ದಿಯನ್ನೂ ಓದಿ: Election Commission: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆಗೆ ಮುಹೂರ್ತ ಫಿಕ್ಸ್; ಇಲ್ಲಿದೆ ಡಿಟೇಲ್ಸ್