ಜೈಪುರ: ಎರಡು ವರ್ಷಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ರಾಜಸ್ಥಾನದ ಟೈಲರ್ ಕನ್ಹಯ್ಯಲಾಲ್ (Kanhaiya Lal Killing) ಬರ್ಬರ ಕೊಲೆ ಪ್ರಕರಣದ ಆರೋಪಿಯೊಬ್ಬನಿಗೆ ರಾಜಸ್ಥಾನ ಹೈಕೋರ್ಟ್ ಇಂದು ಜಾಮೀನು ನೀಡಿದೆ. 2022ರಲ್ಲಿ ನಡೆದ ಈ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮೊಹಮ್ಮದ್ ಜಾವೇದ್‌ಗೆ ಇದೀಗ ಜಾಮೀನು ಸಿಕ್ಕಿದ್ದು, ಈತನನ್ನು ಎನ್‌ಐಎ(NIA) ಉದಯ್‌ಪುರದಲ್ಲಿ ಜು.22, 2022ರಲ್ಲಿ ಅರೆಸ್ಟ್ ಮಾಡಿತ್ತು.
ಏನಿದು ಪ್ರಕರಣ?
ಇಸ್ಲಾಂ ಧರ್ಮಗುರು ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ನೂಪುರ್ ಶರ್ಮ ಅವರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದನ್ನೇ ನೆಪವಾಗಿಟ್ಟುಕೊಂಡು ಟೇಲರ್ ವೃತ್ತಿಯ ಕನ್ಹಯ್ಯ ಲಾಲ್ ಅವರನ್ನು ಅತ್ಯಂತ ಭಯಾನಕವಾಗಿ ಕೊಂದು ಹಾಕಿದ್ದರು ದುಷ್ಟರಾದ ಮೊಹಮ್ಮದ್ ರಿಯಾಜ್ ಅಟ್ಟಾರಿ ಮತ್ತು ಗೌಸ್ ಮೊಹಮ್ಮದ್. ಕುರ್ತಾ ಹೊಲಿಸಿಕೊಳ್ಳುವ ನೆಪದಲ್ಲಿ ಅಂಗಡಿಗೆ ಹೋಗಿ ಕನ್ಹಯ್ಯ ಲಾಲ್ ಅವರು ಅಳತೆ ತೆಗೆಯಲು ಬಾಗುತ್ತಿದ್ದಂತೆಯೇ ಗೋಣನ್ನೇ ಕತ್ತರಿಸಿ ಶಿರಚ್ಛೇದನ ಮಾಡಿದ್ದರು ಇವರು. ಸಾಲದ್ದಕ್ಕೆ ಕೊಲೆ ಮಾಡುವ ದೃಶ್ಯವನ್ನು ಚಿತ್ರೀಕರಿಸಿಕೊಂಡು ತಾವೇ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
Rajasthan | Kanhaiya Lal murder case: The division bench of the High Court grants bail to accused Mohammad Javed on a bail bond of Rs 2 lakh and surety of Rs 1 lakh each. Mohammad Javed is accused of doing recce in this case.
— ANI (@ANI) September 5, 2024
ಜಾವೇದ್ ಪಾತ್ರವೇನು?
ಎನ್ಐಎ ಪ್ರಕಾರ, ಜಾವೇದ್ ಹತ್ಯೆಯ ಸಂಚಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದು, ಕನ್ಹಯ್ಯಾ ಲಾಲ್ ತನ್ನ ಅಂಗಡಿಯಲ್ಲಿ ಇರುವ ಬಗ್ಗೆ ಮಾಹಿತಿಯನ್ನು ಅಟ್ಟಾರಿ ಮತ್ತು ಘೌಸ್ ಮೊಹಮ್ಮದ್ ಇಬ್ಬರಿಗೂ ಕೊಲ್ಲುವ ಮೊದಲು ರವಾನಿಸಿದ್ದ ಎನ್ನಲಾಗಿದೆ. ಪಾಕಿಸ್ತಾನದ ದಾವತ್ ಇ ಇಸ್ಲಾಮಿ ಎಂಬ ಧಾರ್ಮಿಕ ಮೂಲಭೂತವಾದಿ ಸಂಘಟನೆಯ ಜತೆ ಸಂಪರ್ಕದಲ್ಲಿದ್ದು, ಅಲ್ಲಿ ತರಬೇತಿಯನ್ನೂ ಪಡೆದಿದ್ದ ಈ ಧೂರ್ತರು ಐಸಿಸ್ ನಡೆಸುವ ಕ್ರೌರ್ಯದ ವಿಡಿಯೊಗಳನ್ನು ನೋಡಿ ಇನ್ನಷ್ಟು ಕ್ರೂರಿಗಳಾಗಿದ್ದರು. ಅಲ್ಲದೇ ಐಸಿಸ್ ಮಾದರಿಯಲ್ಲೇ ಶಿರಚ್ಛೇದ ಮಾಡಿದ್ದಾರೆ ಎನ್ನಲಾಗಿದೆ.
ಘಟನೆ ನಡೆದು ಎರಡು ವರ್ಷ ಕಳೆದರೂ ಟೇಲರ್ ಕನ್ಹಯ್ಯ ಕುಟುಂಬ ಇನ್ನೂ ಅವರ ಚಿತಾಭಸ್ಮವನ್ನು ನೀರಿನಲ್ಲಿ ಮುಳುಗಿಸದೇ ಹಾಗೇ ಇಟ್ಟುಕೊಂಡಿದೆ. ಹಂತಕರಿಗೆ ಮರಣದಂಡನೆ ವಿಧಿಸಿದಾಗ ಮಾತ್ರ ತಮ್ಮ ತಂದೆಗೆ ಮೋಕ್ಷ ಸಿಗುತ್ತದೆ ಎಂದು ಕನ್ಹಯ್ಯಾಲಾಲ್ ಪುತ್ರರು ಹೇಳುತ್ತಾರೆ. ಅಲ್ಲದೇ ಹಂತಕರಿಗೆ ಗಲ್ಲುಶಿಕ್ಷೆಯಾಗುವವರೆಗೆ ಚಪ್ಪಲಿ ಧರಿಸುವುದಿಲ್ಲ ಎಂದು ಕನ್ಹಯ್ಯಲಾಲ್ ಪುತ್ರ ಶಪತ ಮಾಡಿದ್ದಾನೆ, ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Pakistan Crisis: ಪಾಕ್ ಸ್ಥಿತಿ ಅಯೋಮಯ; ಮಾಲ್‌ಗೆ ನುಗ್ಗಿ ಬಟ್ಟೆಗಳನ್ನು ಲೂಟಿ ಮಾಡಿದ ಜನ; ಕೊನೆಗೆ ಲಾಠಿಚಾರ್ಜ್!