Wednesday, 11th December 2024

ಗಣರಾಜ್ಯೋತ್ಸವದ ಪರೇಡ್ ಸ್ತಬ್ಧಚಿತ್ರ: ಕರ್ನಾಟಕಕ್ಕೆ ಎರಡನೇ ಸ್ಥಾನ

ನವದೆಹಲಿ: ಗಣರಾಜ್ಯೋತ್ಸವದ ಪರೇಡ್ 2022ರ ಅತ್ಯುತ್ತಮ ಟ್ಯಾಬ್ಲೋ ಮತ್ತು ಅತ್ಯುತ್ತಮ ಮೆರವಣಿಗೆ ಸ್ಪರ್ಧೆಯಲ್ಲಿ ಉತ್ತರಪ್ರದೇಶದ ‘ಒಂದು ಜಿಲ್ಲೆ ಒಂದು ಉತ್ಪನ್ನ ಮತ್ತು ಕಾಶಿ ವಿಶ್ವನಾಥ ಧಾಮ’ ಕುರಿತಾದ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ, ಕರ್ನಾಟಕದ ‘ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು’ ಎಂಬ ವಿಷಯಾಧಾರಿತವಾಗಿದ್ದ ಸ್ತಬ್ಧಚಿತ್ರಕ್ಕೆ ಎರಡನೇ ಸ್ಥಾನ ಲಭಿಸಿದೆ.

ಮೇಘಾಲಯದ 50 ವರ್ಷಗಳ ರಾಜ್ಯತ್ವ ಮತ್ತು ಮಹಿಳಾ ನೇತೃತ್ವದ ಸಹಕಾರಿ ಸಂಘಗಳು ಮತ್ತು ಸ್ವಸಹಾಯ ಸಂಘಗಳಿಗೆ ರಾಜತ್ವದ ಕೊಡುಗೆ ಎಂಬ ವಿಷಯಕ್ಕೆ ಮೂರನೇ ಸ್ಥಾನ ಲಭಿಸಿದೆ.

ಜನವರಿ 26, 2022ರ ಗಣರಾಜ್ಯೋತ್ಸವದಂದು ನಡೆದ ಪರೇಡ್‌ನಲ್ಲಿ 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಿದ್ದವು.

ಕವಾಯತು ತಂಡಗಳ ಕಾರ್ಯಕ್ಷಮತೆ ನಿರ್ಣಯಿಸಲು ಮೂವರು ನ್ಯಾಯಾಧೀಶರ ಸಮಿತಿಗಳನ್ನು ನೇಮಿಸ ಲಾಗಿತ್ತು. ಇವರ ಮೌಲ್ಯಮಾಪನದ ಆಧಾರದ ಮೇಲೆ, ಭಾರತೀಯ ನೌಕಾಪಡೆಯ ಕವಾಯತು ತಂಡವು ಮೂರು ಸೇವೆಗಳಲ್ಲಿ ಅತ್ಯುತ್ತಮ ಕವಾಯತು ತುಕಡಿ ಎಂದು ಪ್ರಶಸ್ತಿ ಗಳಿಸಿದ್ದರೆ, CAPF ಹಾಗೂ ಇತರ ಸಹಾ ಯಕ ಪಡೆಗಳಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಅತ್ಯುತ್ತಮ ಕವಾಯತು ತಂಡ ಎಂಬ ಪ್ರಶಸ್ತಿ ಗಳಿಸಿದೆ.

ಕೇಂದ್ರ ಸಚಿವಾಲಯಗಳ ಟ್ಯಾಬ್ಲೋ ವಿಭಾಗದಲ್ಲಿ ಶಿಕ್ಷಣ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಟ್ಯಾಬ್ಲೋವನ್ನು ಜಂಟಿ ವಿಜೇತರು ಎಂದು ಘೋಷಿಸಲಾಗಿದೆ.

ಜನಪ್ರಿಯ ಆಯ್ಕೆಯ ವಿಭಾಗದಲ್ಲಿ ಮಹಾರಾಷ್ಟ್ರದ ಸ್ತಬ್ಧಚಿತ್ರವನ್ನು ಅತ್ಯುತ್ತಮ ಸ್ತಬ್ಧಚಿತ್ರ ಎಂದು, ಎರಡನೇ ಸ್ಥಾನವನ್ನು ಉತ್ತರಪ್ರದೇಶ ಪಡೆದರೆ, ಜಮ್ಮು ಮತ್ತು ಕಾಶ್ಮೀರದ ಟ್ಯಾಬ್ಲೋ, “ಜಮ್ಮು ಮತ್ತು ಕಾಶ್ಮೀರದ ಬದಲಾಗುತ್ತಿರುವ ಮುಖ’ ಎಂಬ ವಿಷಯದ ಮೇಲೆ ಮೂರನೇ ಸ್ಥಾನ ಗಳಿಸಿತು.

ಜನರ ಆಯ್ಕೆಯ ಆಧಾರದ ಮೇಲೆ ಅತ್ಯುತ್ತಮ ಕೇಂದ್ರ ಸಚಿವಾಲಯದಡಿ ಅಂಚೆ ಇಲಾಖೆಗೆ ಅತ್ಯುತ್ತಮ ಇಲಾಖೆ ಎಂಬ ಪ್ರಶಸ್ತಿ ಲಭಿಸಿದೆ.