1937ರ ಫೆಬ್ರುವರಿ 4ರಂದು ಖ್ಯಾತ ಕಥಕ್ ಕಲಾವಿದರ ಕುಟುಂಬದಲ್ಲಿ ಜನಿಸಿದರು. ತಂದೆ ಅಚ್ಚನ್ ಮಹಾರಾಜ್ ಮತ್ತು ಚಿಕ್ಕಪ್ಪಂದಿರಾದ ಶಂಭು ಮತ್ತು ಲಚ್ಚು ಮಹಾರಾಜ್ ಅವರ ಮಾರ್ಗದರ್ಶನ ದಲ್ಲಿ ಬಿಂದದೀನ್ ಮಹಾರಾಜ್ ಅವರ ಪ್ರಭಾವಕ್ಕೆ ಒಳಗಾದರು.
ಮಗುವಾಗಿದ್ದಾಗಲೇ ತಂದೆಯ ಜತೆ ಪ್ರದರ್ಶನ ನೀಡುತ್ತಿದ್ದ ಅವರು ಹದಿಹರೆಯದಲ್ಲೇ ಗುರು (ಮಹಾರಾಜ್) ಎನಿಸಿಕೊಂಡಿದ್ದರು. ರಾಂಪುರದ ನವಾಬರ ದರ್ಬಾರ್‌ನಲ್ಲೂ ಮಹಾರಾಜ್ ನೃತ್ಯ ಪ್ರದರ್ಶನ ನೀಡಿದ್ದರು. 28ನೇ ವಯಸ್ಸಿನಲ್ಲೇ ತಮ್ಮ ಅಪೂರ್ವ ಪ್ರೌಢಿಮೆ ಮೆರೆದಿದ್ದ ಮಹಾರಾಜ್ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿತ್ತು.
ಪರಿಪೂರ್ಣ ಲಯ ಮತ್ತು ಅಭಿವ್ಯಕ್ತಿಯ ಅಭಿನಯಕ್ಕೆ ಹೆಸರಾಗಿದ್ದ ಅವರು, ತಮ್ಮದೇ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡಿದ್ದರು. ಅದ್ಭುತ ಕೊರಿಯಾಗ್ರಾಫರ್ ಎನಿಸಿಕೊಂಡಿದ್ದ ಅವರು ನೃತ್ಯನಾಟಕಗಳನ್ನು ಜನಪ್ರಿಯಗೊಳಿಸುವಲ್ಲಿ ಶ್ರಮಿಸಿದ್ದರು. ಈ ಪ್ರದರ್ಶನ ಕಲೆಗೆ ನೀಡಿದ ಕೊಡುಗೆಗಾಗಿ ಹಲವು ಪ್ರಶಸ್ತಿ ಪುರಸ್ಕಾರ ಗಳು ಇವರಿಗೆ ಸಂದಿದ್ದವು.
1986ರಲ್ಲಿ ಮಹಾರಾಜ್ ಅವರನ್ನು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.