Thursday, 12th December 2024

KC Tyagi: ಮಹತ್ವದ ಹುದ್ದೆಗೆ ಕೆ.ಸಿ.ತ್ಯಾಗಿ ಗುಡ್‌ ಬೈ; JDU ವಕ್ತಾರ ಸ್ಥಾನಕ್ಕೆ ರಾಜೀನಾಮೆ

KC tyagi

ನವದೆಹಲಿ: ಜನತಾ ದಳ ಯುನೈಟೆಡ್(JDU) ನಾಯಕ ಕೆಸಿ ತ್ಯಾಗಿ(KC Tyagi) ಭಾನುವಾರ ಪಕ್ಷದ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇನ್ನು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಜೆಡಿಯು ನಾಯಕ ರಾಜೀವ್ ಪ್ರಸಾದ್ ರಂಜನ್ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿದೆ ಎಂದು ಪಕ್ಷ ಹೇಳಿದೆ.

ಏಕರೂಪ ನಾಗರಿಕ ಸಂಹಿತೆಯಾಗಲಿ, ವಕ್ಫ್ (ತಿದ್ದುಪಡಿ) ಮಸೂದೆಯಾಗಲಿ ಅಥವಾ ಪ್ಯಾಲೆಸ್ತೀನ್ ವಿಷಯದಲ್ಲಿ ಸರಕಾರದ ನಿಲುವಿನ ಬಗ್ಗೆ, ಕೆ.ಸಿ.ತ್ಯಾಗಿಯವರ ಬಹಿರಂಗ ಹೇಳಿಕೆ ಪಕ್ಷದೊಳಗಿನ ಹಲವರಿಗೆ ಹಿಡಿಸಿರಲಿಲ್ಲ. ಅಲ್ಲದೇ ಮಿತ್ರ ಪಕ್ಷ ಬಿಜೆಪಿಗೆ ಇದು ಮುಜುಗರ ಉಂಟು ಮಾಡಿತ್ತು. ಇಬ್ಬರು ಹಿರಿಯ ಜೆಡಿಯು ನಾಯಕರು, ಕೇಂದ್ರ ಸಚಿವ ಲಾಲನ್ ಸಿಂಗ್ ಮತ್ತು ಸಂಸದೀಯ ಪಕ್ಷದ ನಾಯಕ ಸಂಜಯ್ ಝಾ ದೆಹಲಿಯಲ್ಲಿ ನೆಲೆಸಿದ್ದು, ತ್ಯಾಗಿ ಅವರ ಆಗಾಗ್ಗೆ ಸಾರ್ವಜನಿಕ ಹೇಳಿಕೆಯಿಂದ  ಮೈತ್ರಿ ಮೇಲೆ ಪರಿಣಾಮ ಬೀರದಂತೆ ಅದನ್ನು ಸದಾ ನಿಭಾಯಿಸುವ ಕಾರ್ಯ ನಡೆಸುತ್ತಿದ್ದಾರೆ.

ಈ ಎಲ್ಲಾ ಕಾರಣಗಳಿಂದಲ್ಲೇ ತ್ಯಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ತ್ಯಾಗಿ ಅವರು ಬಿಹಾರವನ್ನು ಪ್ರತಿನಿಧಿಸುವ ರಾಜ್ಯಸಭಾ ಸದಸ್ಯರಾಗಿದ್ದಾರೆ ಮತ್ತು ಉದ್ಯಮದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನೂ ಹೊಂದಿದ್ದಾರೆ. ಹಿಂದೆ, ಅವರು ಒಂಬತ್ತನೇ ಲೋಕಸಭೆಯ ಸದಸ್ಯರಾಗಿದ್ದರು. ಕೇಂದ್ರ ಉಗ್ರಾಣ ನಿಗಮದ ಎರಡೂ ಸಮಿತಿಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಕೆ.ಸಿ ತ್ಯಾಗಿ ಅವರು 1974 ರಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು 1984 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಹಾಪುರ್-ಘಾಜಿಯಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಜೆಡಿಯು  ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜೀವ್ ರಂಜನ್ ಪ್ರಸಾದ್ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚೆಗೆ, ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಹೇಳಿಕೆಯನ್ನು ನೀಡಿದ ಸಂಸದರು ಮತ್ತು ಮಾಜಿ ಸಂಸದರಲ್ಲಿ ತ್ಯಾಗಿಯೂ ಪ್ರಮುಖರು. ಇಸ್ರೇಲ್‌ನಿಂದ ನಡೆಯುತ್ತಿರುವ ಪ್ಯಾಲೇಸ್ಟಿನಿಯನ್ ಜನರ ಘೋರ ನರಮೇಧವನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇವೆ. ಈ ಕ್ರೂರ ಆಕ್ರಮಣವು ಮಾನವೀಯತೆಯ ಅವಮಾನ ಮಾತ್ರವಲ್ಲದೆ ನ್ಯಾಯ ಮತ್ತು ಶಾಂತಿ, ಅಂತರರಾಷ್ಟ್ರೀಯ ಕಾನೂನು ಮತ್ತು ತತ್ವಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಹೇಳಿಕೆ ತಿಳಿಸಿದೆ. ಇದು ಕೇಂದ್ರ ಸರ್ಕಾರ ನಿಲುವಿಗೆ ಸಂಪೂರ್ಣ ವಿರುದ್ಧವಾಗಿರುವ ಹಿನ್ನೆಲೆ ಮೈತ್ರಿ ಒಕ್ಕೂಟಕ್ಕೆ ಭಾರೀ ಮುಜುಗರ ತಂದಿತ್ತು.