Sunday, 15th December 2024

ಪ್ರಧಾನಿಗೆ ಸ್ವಾಗತ: ಮೂರನೇ ಬಾರಿ ಶಿಷ್ಟಾಚಾರ ಮುರಿದ ಸಿಎಂ ಕೆಸಿಆರ್‌ !

ಹೈದರಾಬಾದ್: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಹೈದರಾಬಾದ್ ಗೆ ಆಗಮಿ ಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಬರುತ್ತಿಲ್ಲ.

ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಕೆಲವೇ ಗಂಟೆಗಳ ಮೊದಲು ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಸ್ವಾಗತಿಸಲು ತೆಲಂಗಾಣ ಮುಖ್ಯ ಮಂತ್ರಿ ಕೆ ಚಂದ್ರಶೇಖರ್ ರಾವ್ ಬರಲಿದ್ದಾರೆ. ಜು.18 ರಂದು ನಡೆಯಲಿರುವ ಮುಂಬ ರುವ ರಾಷ್ಟ್ರಪತಿ ಚುನಾವಣೆಯಲ್ಲಿ ಸಿನ್ಹಾ ಅವರಿಗೆ ಬೆಂಬಲ ನೀಡುವುದಾಗಿ ಕೆಸಿಆರ್ ಘೋಷಿಸಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಸಚಿವರು ಯಶವಂತ್ ಸಿನ್ಹಾ ಅವರನ್ನು ಬರಮಾಡಿಕೊಳ್ಳಲಿದ್ದಾರೆ.

ವಿಶೇಷವೆಂದರೆ ಪ್ರಧಾನಿ ನರೇಂದ್ರ ಮೋದಿ ಕಳೆದ ಆರು ತಿಂಗಳಲ್ಲಿ ಮೂರನೇ ಬಾರಿಗೆ ತೆಲಂಗಾಣಕ್ಕೆ ಆಗಮಿಸುತ್ತಿದ್ದು, ಒಂದು ಬಾರಿಯೂ ಪ್ರಧಾನಿ ಅವರನ್ನು ಆಹ್ವಾನಿಸದೇ ಶಿಷ್ಟಾಚಾರ ಮುರಿದಿದ್ದಾರೆ.

ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷ ವ್ಯಾಪಿಸುವುದು ಮತ್ತು ಈ ವರ್ಷಾಂತ್ಯದಲ್ಲಿ ಎರಡು ರಾಜ್ಯಗಳಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ಯೋಜನೆ ರೂಪಿಸುವುದು ಮುಂತಾದ ಮಹತ್ವದ ಅಜೆಂಡಾ ಕುರಿತು ಹೈದರಾಬಾದ್‌ನಲ್ಲಿ ಬಿಜೆಪಿಯ ದೊಡ್ಡ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ.

ಜುಲೈ 2-3 ರಂದು ಇಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂತಾದ ಹಿರಿಯ ನಾಯಕರು ಭಾಗಿಯಾಗಲಿದ್ದಾರೆ.