ತಿರುವನಂತಪುರಂ: ಕೇರಳದ (Kerala) ಮಲಪ್ಪುರಂ ಜಿಲ್ಲೆಯಲ್ಲಿ 36 ವರ್ಷದ ಪೊಲೀಸ್ ಕಮಾಂಡೋ (Kerala Commando) ಒಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ ಎಂದು ಕೇರಳ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತಪಟ್ಟವರನ್ನು ವಿನೀತ್ ಎಂದು ಗುರುತಿಸಲಾಗಿದೆ. ಈ ಮೊದಲು ಮಲಪ್ಪುರಂ ಜಿಲ್ಲೆಯಲ್ಲಿ ಥಂಡರ್‌ಬೋಲ್ಟ್ ಕಮಾಂಡೋ ಆಗಿ ಸೇವೆ ಸಲ್ಲಿಸುತ್ತಿದ್ದರು. ಈಗ ವಿಶೇಷ ಕಾರ್ಯಾಚರಣೆ ಗುಂಪಿನ (SOG) ಭಾಗವಾಗಿರುವ ವಿನೀತ್ ಭಾನುವಾರ ಪೊಲೀಸ್ ಕ್ವಾರ್ಟರ್ಸ್‌ನ ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ವಯನಾಡ್ ಜಿಲ್ಲೆಯವರಾದ ವಿನೀತ್ ಪದೇ ಪದೆ ಮನವಿ ಮಾಡಿದರೂ ರಜೆ ಸಿಗದಿರುವ ಬಗ್ಗೆ ಅಸಮಾಧಾನ ಹೊಂದಿದ್ದರು ಎಂದು ತಿಳಿದು ಬಂದಿದೆ. ರಜೆ ಸಿಗದಿದ್ದಕ್ಕೆ ಮನನೊಂದು ಈ ನಿರ್ಣಯ ಕೈಗೊಂಡಿದ್ದಾರೆ ಎಂದು ಊಹಿಸಲಾಗಿದೆ. ಆದರೆ ಈ ಬಗ್ಗೆ ಪೊಲೀಸರು ಇನ್ನೂ ಖಚಿತಪಡಿಸಿಲ್ಲ. ಅವರು ತನ್ನ ಮೇಲೆ ಗುಂಡು ಹಾರಿಸಿಕೊಂಡು ಸತ್ತಿದ್ದಾರೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಏರ್‌ಫೋರ್ಸ್ ಸಿಬ್ಬಂದಿ ಆತ್ಮಹತ್ಯೆ
ನಾಗ್ಪುರದ ವಾಯುಸೇನಾ ನಗರದಲ್ಲಿರುವ ನಿರ್ವಹಣಾ ಕಮಾಂಡ್ ಸೆಂಟರ್‌ನಲ್ಲಿ ಬುಧವಾರ (ಡಿ 11) ಮುಂಜಾನೆ ವಾಯುಪಡೆಯ ಸಾರ್ಜೆಂಟ್ ಒಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಯಾಣದ ಭಿವಾನಿ ಮೂಲದ 36 ವರ್ಷದ ಜವೀರ್ ಸಿಂಗ್, ನಸುಕಿನ 2 ಗಂಟೆಯ ಸುಮಾರಿಗೆ ತನ್ನ ಸೇವಾ ಆಯುಧದಿಂದ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಗಿಟ್ಟಿಖಾದನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ . ಗುಂಡಿನ ಸದ್ದು ಇತರ ಸಿಬ್ಬಂದಿಯನ್ನು ಎಚ್ಚರಿಸಿತು, ಜವೀರ್ ಸಿಂಗ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಆಸ್ಪತ್ರೆಗೆ ಸೇರಿಸಲಾಗಿದ್ದರೂ ಅವರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಅವರು ಒತ್ತಡಕ್ಕೆ ಒಳಗಾಗಿದ್ದರು ಎಂದು ಸಿಂಗ್ ಅವರ ಸಹೋದ್ಯೋಗಿಗಳು ಪೊಲೀಸರಿಗೆ ತಿಳಿಸಿದ್ದಾರೆ, ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣವನ್ನು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದ್ದು, ತನಿಖೆಯ ನಂತರ ಕಾರಣ ಹೊರ ಬರಬೇಕಾಗಿದೆ.
ಈ ಸುದ್ದಿಯನ್ನೂ ಓದಿ : Viral Video: ಮುಂಬೈಯ ಭೀಕರ ಬಸ್ ದುರಂತ: ವೈರಲ್ ಆಯ್ತು ಅಪಘಾತದ ವಿಡಿಯೊ