Sunday, 15th December 2024

ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ನಿಧನ: ಗಣ್ಯರಿಂದ ಸಂತಾಪ

ತಿರುವನಂತಪುರಂ: ಹಿರಿಯ ಕಾಂಗ್ರೆಸ್‌ ನಾಯಕ ಹಾಗು ಕೇರಳ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಉಮ್ಮನ್ ಚಾಂಡಿ(79) ಮಂಗಳವಾರ ನಿಧನರಾದರು.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಚಿನ್ಮಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮಾಜಿ ಸಿಎಂ ನಿಧನದ ಸುದ್ದಿಯನ್ನು ಪುತ್ರ ಚಾಂಡಿ ಉಮ್ಮನ್ ಅವರು ಫೇಸ್‌ಬುಕ್ ಪೋಸ್ಟ್‌ ಮೂಲಕ “ಅಪ್ಪಾ ಮೃತಪಟ್ಟರು” ಎಂದು ಬರೆದು ತಿಳಿಸಿದ್ದಾರೆ. ಈ ವರ್ಷಾರಂಭದಲ್ಲಿ ನ್ಯೂಮೋನಿಯಾ ಬಾಧಿಸಿದ ಹಿನ್ನೆಲೆಯಲ್ಲಿ ಚಾಂಡಿ ಅವರನ್ನು ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿತ್ತು.

ಉಮ್ಮನ್​ ಚಾಂಡಿ ಅಕ್ಟೋಬರ್ 31, 1943ರಲ್ಲಿ ಕೇರಳದ ಕೊಟ್ಟಾಯಂ ಜಿಲ್ಲೆಯ ಕುಮಾರಕಟ್​ ಎಂಬಲ್ಲಿ ಜನಿಸಿದರು. ಚಾಂಡಿ ಮತ್ತು ಬೇಬಿ ಚಾಂಡಿ ದಂಪತಿಯ ಪುತ್ರ. ಪುದುಪಲ್ಲಿಯ ಸೇಂಟ್ ಜಾರ್ಜ್ ಹೈಸ್ಕೂಲ್‌, ಕೊಟ್ಟಾಯಂ ಸಿಎಂಎಸ್ ಕಾಲೇಜಿನಲ್ಲಿ ಪಿಯು, ಚಂಗನಾಶ್ಶೇರಿ ಎಸ್.ಬಿ.ಕಾಲೇಜಿನಲ್ಲಿ ಬಿಎ ಮತ್ತು ಎರ್ನಾಕುಲಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ.

ಯೌವನದಿಂದಲೂ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಚಾಂಡಿ, ವಿದ್ಯಾರ್ಥಿ ಒಕ್ಕೂಟದ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದರು. ಮುಖ್ಯಮಂತ್ರಿ ಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ನಾಲ್ಕು ಬಾರಿ ಸಚಿವರಾಗಿದ್ದರು.

ಉಮ್ಮನ್ ಚಾಂಡಿ ನಿಧನಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ.