Thursday, 12th December 2024

ಕೇರಳ ಕಾಂಗ್ರೆಸ್ ಉಪಾಧ್ಯಕ್ಷ ರಾಜೀನಾಮೆ: ಹೊಸ ಪಕ್ಷ ಕಟ್ಟುವ ಇಂಗಿತ

ಕೊಚ್ಚಿನ್: ಬಿಜೆಪಿ ಬೆಂಬಲಿತ ರಾಜಕೀಯ ಪಕ್ಷವನ್ನು ಹುಟ್ಟುಹಾಕುವ ವದಂತಿಗಳ ನಡುವೆಯೇ ಕೇರಳ ಕಾಂಗ್ರೆಸ್ (ಜೋಸೆಫ್) ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಜಾನಿ ನೆಲ್ಲೋರ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರೀಯ ಪ್ರಸ್ತುತತೆಯ ಜಾತ್ಯತೀತ ಪಕ್ಷ ಕಟ್ಟುವ ಯೋಜನೆಯನ್ನು ಜಾನಿ ಪ್ರಕಟಿಸಿದ್ದಾರೆ.

ಯುಡಿಎಫ್ ರಾಜ್ಯ ಕಾರ್ಯದರ್ಶಿ ಸ್ಥಾನ ತ್ಯಜಿಸಿ ಮಾತನಾಡಿ, ಹೊಸ ಪಕ್ಷವನ್ನು ಅಧಿಕೃತವಾಗಿ ಮೂರು- ನಾಲ್ಕು ದಿನಗಳಲ್ಲಿ ಘೋಷಿಸುವುದಾಗಿ ತಿಳಿಸಿದರು. “ಹೊಸ ಪಕ್ಷದ ಬಗ್ಗೆ ಹೆಚ್ಚಿನದೇನೂ ಹೇಳಬಯಸುವುದಿಲ್ಲ. ಹಿರಿಯ ಮುಖಂಡರು ಪಕ್ಷಕ್ಕೆ ಅಂತಿಮ ರೂಪುರೇಷೆ ನೀಡುತ್ತಿದ್ದಾರೆ. ಇದು ಕೇವಲ ಕೇರಳಕ್ಕೆ ಸೀಮಿತವಾಗಿರುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

“ಕಳೆದ ಮೂವತ್ತು ವರ್ಷಗಳಿಂದ ನಾನು ಯುಡಿಎಫ್ ಉನ್ನತಾಧಿಕಾರ ಸಮಿತಿಯಲ್ಲಿದ್ದೆ. 2016ರಿಂದ ರಾಜ್ಯ ಕಾರ‌್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೆ. ಹಿಂದಿಗಿಂತ ಭಿನ್ನವಾಗಿ ಕಾಂಗ್ರೆಸ್ ಪಕ್ಷ ಇದೀಗ ಮಿತ್ರ ಪಕ್ಷಗಳಿಗೆ ಮಹತ್ವ ನೀಡುತ್ತಿಲ್ಲ. ಈ ಬಗ್ಗೆ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ” ಎಂದು ಹೇಳಿದರು.

ನೆಲ್ಲೋರ್ ಅವರು ಪಕ್ಷದ ಅಧ್ಯಕ್ಷ ಪಿ.ಜೆ.ಜೋಸೆಫ್ ಮತ್ತು ಯುಡಿಎಫ್ ಅಧ್ಯಕ್ಷ ವಿ.ಡಿ.ಸತೀಶನ್ ಅವರಿಗೆ ರಾಜೀನಾಮೆ ಪತ್ರವನ್ನು ನೀಡಿದರು.