Saturday, 23rd November 2024

ಭದ್ರತೆ ದೃಷ್ಟಿಯಿಂದ ಶಬರಿಮಲೆಗೆ ಅಲಂಕರಿಸಿದ ವಾಹನಗಳಿಗೆ ಅನುಮತಿ ಇಲ್ಲ: ಕೇರಳ ಹೈಕೋರ್ಟ್

ತಿರುವನಂತಪುರಂ: ಶಬರಿಮಲೆ-ಮಕರವಿಳಕ್ಕು ಋತುವಿನಲ್ಲಿ ಶಬರಿಮಲೆ ಯಾತ್ರಿಕರು ಅಥವಾ ಇತರ ಯಾವುದೇ ಪ್ರಯಾಣಿಕರನ್ನು ಅವರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕ ಸ್ಥಳಗಳಲ್ಲಿ ಹೂವು ಮತ್ತು ಎಲೆಗಳಿಂದ ಅಲಂಕರಿಸಿದ ಕೆಎಸ್‌ಆರ್ಟಿಸಿ ಬಸ್ ಸೇರಿದಂತೆ ವಾಹನ ಗಳನ್ನು ಅನುಮತಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.

ನಿಲಕ್ಕಲ್‌ನಿಂದ ವಾಹನಗಳ ಪ್ರವೇಶ ಮತ್ತು ಪಂಪಾದಲ್ಲಿ ವಾಹನಗಳ ನಿಲುಗಡೆಗೆ ಸಂಬಂಧಿಸಿ, ಶಬರಿಮಲೆ ಯಾತ್ರಾರ್ಥಿಗಳನ್ನು ಹೊತ್ತ 15 ರವರೆಗೆ ಆಸನ ಸಾಮರ್ಥ್ಯದ ಲಘು ಮೋಟಾರು ವಾಹನಗಳಿಗೆ ಯಾತ್ರಿಕರನ್ನು ಬಿಡುವ ಉದ್ದೇಶಕ್ಕಾಗಿ ಪಂಪಾಕ್ಕೆ ಹೋಗಲು ಅನುಮತಿ ನೀಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಪಂಪಾದಲ್ಲಿ ಯಾತ್ರಾರ್ಥಿಗಳನ್ನು ಇಳಿಸಿದ ಕೂಡಲೇ ವಾಹನಗಳನ್ನು ನಿಲಕ್ಕಲ್‌ಗೆ ವಾಹನ ನಿಲುಗಡೆಗೆ ಚಾಲಕರು ಕೊಂಡೊಯ್ಯಬೇಕು. ಯಾತ್ರಾರ್ಥಿ ಗಳು ದರ್ಶನದ ನಂತರ ಪಂಪಾವನ್ನು ತಲುಪಿದಾಗ, ಸಂಬಂಧಪಟ್ಟ ವಾಹನಗಳ ಚಾಲಕರು ಯಾತ್ರಾರ್ಥಿಗಳನ್ನು ಮರಳಿ ಕರೆತರಲು ಮಾತ್ರ ಮರು ಪ್ರವೇಶಿಸಲು ಅನುಮತಿಸಲಾಗುತ್ತದೆ. ನಿಲಕ್ಕಲ್‌ನಿಂದ ಪಂಪಾವರೆಗಿನ ರಸ್ತೆಬದಿಯಲ್ಲಿ ವಾಹನ ನಿಲುಗಡೆಗೆ ಅನುಮತಿ ನೀಡಬಾರದು.

ನ್ಯಾಯಮೂರ್ತಿ ಅನಿಲ್ ಕೆ ನರೇಂದ್ರನ್ ಮತ್ತು ನ್ಯಾಯಮೂರ್ತಿ ಸೋಫಿ ಥಾಮಸ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಮಂಡಲ-ಮಕರವಿಳಕ್ಕು ಉತ್ಸವಕ್ಕೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿ, ರಾಜ್ಯ ಸರ್ಕಾರ ಮತ್ತು ಪೊಲೀಸರು ಮಾಡಬೇಕಾದ ಸಿದ್ಧತೆ ಮತ್ತು ಕ್ರಿಯಾ ಯೋಜನೆಗಳ ಕುರಿತು ಸ್ವಯಂಪ್ರೇರಿತ ಪ್ರಕರಣದಲ್ಲಿ ನಿರ್ದೇಶನ ನೀಡಿದೆ.