Friday, 22nd November 2024

ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ಬಿರಿಯಾನಿ ಸೇವಿಸಿ ಯುವತಿ ಸಾವು

ಕಾಸರಗೋಡು (ಕೇರಳ): ಕೇರಳದ ಕಾಸರಗೋಡಿನಲ್ಲಿ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ಬಿರಿಯಾನಿ ಸೇವಿಸಿದ ಬಳಿಕ ಯುವತಿ ಮೃತಪಟ್ಟಿದ್ದಾಳೆ. ಮೃತ ಯುವತಿಯನ್ನು ಅಂಜು ಶ್ರೀಪಾರ್ವತಿ (20) ಎಂದು ಗುರುತಿಸಲಾಗಿದೆ.

ರೊಮ್ಯಾನ್ಸಿಯಾ ಎಂಬ ರೆಸ್ಟೊರೆಂಟ್‌ನಿಂದ ಆನ್‌ಲೈನ್‌ನಲ್ಲಿ’ಕುಜಿಮಂತಿ’ ಬಿರಿಯಾನಿ ಖಾದ್ಯವಾದ ಆರ್ಡರ್ ಮಾಡಿದ್ದರು. ಯುವತಿ ಆರೋಗ್ಯದಲ್ಲಿ ಕೊಂಚ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಆಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಯುವತಿ ಶನಿವಾರ ಸಾವನ್ನಪ್ಪಿ ದ್ದಾಳೆ ಎಂದು ತಿಳಿದು ಬಂದದಿದೆ.

ಘಟನೆ ಸಂಬಂಧ ಯುವತಿಯ ಪೋಷಕರು ದೂರು ನೀಡಿದ್ದು, ಪೊಲೀಸರು ಪ್ರಕರಣ ತನಿಖೆ ಕೈಗೊಂಡಿದ್ದು, ವಿಧಿವಿಜ್ಞಾನ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ಆಹಾರ ವಿಷದ ಆರೋಪ ಹೊತ್ತಿರುವ ಹೋಟೆಲ್‌ಗಳ ಪರವಾನಗಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ (ಎಫ್‌ಎಸ್‌ಎಸ್‌ಎ) ಅಡಿಯಲ್ಲಿ ರದ್ದುಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ನರ್ಸ್ ಕೋಝಿಕ್ಕೋಡ್‌ನ ಉಪಾಹಾರ ಗೃಹದಿಂದ ಆಹಾರ ಸೇವಿಸಿದ ನಂತರ ಸಾವನ್ನಪ್ಪಿದ್ದ ಘಟನೆ ವರದಿಯಾಗಿತ್ತು.