ತಿರುವನಂತಪುರಂ: ನಿಫಾ ವೈರಸ್ ಭೀತಿ ಹಿನ್ನಲೆಯಲ್ಲಿ ಕೊಯಿಕ್ಕೋಡ್ ಜಿಲ್ಲಾಡಳಿತ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸೂಚನೆಯೊಂದನ್ನು ನೀಡಿದೆ.
ಸೆಪ್ಟೆಂಬರ್ 18 ರಿಂದ ಮುಂದಿನ ಆದೇಶದ ತನಕ ಎಲ್ಲಾ ತರಗತಿಗಳನ್ನು ಆನ್‌ಲೈನ್ ಮೂಲಕ ನಡೆಸಬೇಕು ಎಂದು ತಿಳಿಸಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಸೋಂಕು ಹರಡುವಿಕೆ ತಡೆಯಲು ಮುಂದಾಗಿದೆ.
ಕೊಯಿಕ್ಕೋಡ್ ಜಿಲ್ಲಾ ಕಲೆಕ್ಟರ್ ಎ. ಗೀತಾ ಈ ಕುರಿತು ಶನಿವಾರ ಸುತ್ತೋಲೆ ಹೊರಡಿಸಿದ್ದಾರೆ. ಸರಣಿ ರಜೆಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಉಂಟಾಗಬಾರದು. ಆದ್ದರಿಂದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಕೊಯಿಕ್ಕೋಡ್ ಜಿಲ್ಲಾಡಳಿತ ನಿಫಾ ವೈರಸ್ ಭೀತಿ ಇಂದ ಸೆಪ್ಟೆಂಬರ್ 24ರ ತನಕ ರಜೆ ಘೋಷಣೆ ಮಾಡಿತ್ತು. ಈಗ ಟ್ಯೂಷನ್ ಸೆಂಟರ್, ಕೋಚಿಂಗ್ ಕ್ಲಾಸ್ ಸೇರಿದಂತೆ ಎಲ್ಲಾ ಸಂಸ್ಥೆಗಳು ಸೆಪ್ಟೆಂಬರ್ 18ರಿಂದ ಆನ್‌ಲೈನ್ ತರಗತಿಗಳನ್ನು ಆರಂಭಿಸಬೇಕು ಎಂದು ಸೂಚನೆ ನೀಡಲಾಗಿದೆ.
“ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಗೆ ಬರುವುದು ಬೇಡ. ಅಂಗನವಾಡಿ, ಮದರಸಾಗಳಿಗೆ ಸಹ ವಿದ್ಯಾರ್ಥಿಗಳು ಆಗಮಿಸುವಂತಿಲ್ಲ. ಮುಂದಿನ ಆದೇಶದ ತನಕ ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸಬೇಕು. ಆದರೆ ಪಬ್ಲಿಕ್ ಪರೀಕ್ಷೆ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ಸುತ್ತೋಲೆ ಸ್ಪಷ್ಟಪಡಿಸಿದೆ.