ಭೋಪಾಲ್ : ವಿವಾದಿತ ‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುವ ನಿರ್ಧಾರವನ್ನು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಹಿಂಪಡೆದಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮಾಧ್ಯಮ ಘಟಕದ ಅಧ್ಯಕ್ಷ ಕೆ.ಕೆ.ಮಿಶ್ರಾ ಹೇಳಿದ್ದಾರೆ.
‘ನಿಯಮಗಳ ಪ್ರಕಾರ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ಹೊಂದಿರುವ ಚಲನಚಿತ್ರಗಳಿಗೆ ಮನರಂಜನಾ ತೆರಿಗೆ ಯಿಂದ ವಿನಾಯಿತಿ ನೀಡಲಾಗುವುದಿಲ್ಲ. ಈ ಕಾರಣಕ್ಕಾಗಿಯೇ ರಾಜ್ಯ ಸರ್ಕಾರ ‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ನೀಡಿರುವ ತೆರಿಗೆ ವಿನಾಯಿತಿಯನ್ನು ಹಿಂಪಡೆದಿದೆ’ ಎಂದು ಕೆ.ಕೆ.ಮಿಶ್ರಾ ಹೇಳಿದ್ದಾರೆ.
ಕೇರಳದ ಹಿಂದೂ ಯುವತಿಯರು ಇಸ್ಲಾಂಗೆ ಮತಾಂತರಗೊಂಡ ನಂತರ ಹೇಗೆ ಭಯೋ ತ್ಪಾದಕ ಸಂಘಟನೆಯ ಜಾಲಕ್ಕೆ ಬೀಳು ತ್ತಾರೆ ಎಂಬ ಚಿತ್ರಕಥೆ ಹೊಂದಿರುವ ‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ನಾಲ್ಕು ದಿನದ ಹಿಂದೆ ಮಧ್ಯಪ್ರದೇಶದ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ಮತ್ತು ಹಿರಿಯ ವಕೀಲ ವಿವೇಕ್ ಟಂಖಾ, ಇದು ಸರ್ಕಾರದ ವಿವೇಕ ಯುತ ನಡೆಯಾಗಿದ್ದು, ಸಮಾಜದ ಹಿತದೃಷ್ಟಿಯಿಂದಲೂ ಉತ್ತಮವಾಗಿದೆ. ‘ದಿ ಕೇರಳ ಸ್ಟೋರಿ’ ಯುವ ಜನರು ನೋಡುವಂತಹ ಸಿನಿಮಾವಲ್ಲ’ ಎಂದು ಹೇಳಿದ್ದಾರೆ.