ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಆರೋಪಿಯಾಗಿರುವ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಅವರು ಜಾರಿ ನಿರ್ದೇಶನಾ ಲಯದ ಬಂಧನದಿಂದ ರಕ್ಷಣೆ ಕೋರಿ ಹಾಗೂ ಸಮನ್ಸ್‌ಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಮಾ.24ರಂದು ಆಲಿಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಗೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಳಗೊಂಡ ನ್ಯಾಯಪೀಠವು, ವಿಧಾನ ಪರಿಷತ್ತಿನ ಸದಸ್ಯೆಯೂ ಆಗಿರುವ ಕವಿತಾ ಅವರ ಮನವಿಯನ್ನು ಗಮನಿಸಿ, ಮಾರ್ಚ್ 24ರಂದು ಅರ್ಜಿಯ ವಿಚಾರಣೆಯನ್ನು ನಡೆಸುವುದಾಗಿ ತಿಳಿಸಿತು.
ಮಾರ್ಚ್ 11ರಂದು ಇ.ಡಿ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದ ಕವಿತಾ ಅವರನ್ನು ಮಾರ್ಚ್ 16ರಂದು ಮತ್ತೆ ವಿಚಾರಣೆಗಾಗಿ ಇ.ಡಿ ಸಮನ್ಸ್ ನೀಡಿದೆ.
‘ಮಾರ್ಚ್ 11ರಂದು ಕವಿತಾ ಇ.ಡಿ ಕಚೇರಿಯಲ್ಲಿ 9 ತಾಸುಗಳ ಕಾಲ ವಿಚಾರಣೆಗೊಳಪಟ್ಟಿದ್ದರು. ಈ ವೇಳೆ ಇದೇ ಪ್ರಕರಣದ ಮತ್ತೊಬ್ಬ ಆರೋಪಿ, ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರನ್ ಪಿಳ್ಳೈ ಅವರ ಮುಂದೆಯೇ ಕವಿತಾ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಯಿತು ಎನ್ನಲಾಗಿದೆ.