Friday, 22nd November 2024

Kolkata Doctor Murder: `ಸಿಎಂ ಆಗಿ ಬಂದಿಲ್ಲ… ಸಹೋದರಿಯಾಗಿ ಬಂದಿದ್ದೇನೆʼ- ಪ್ರತಿಭಟನಾನಿರತ ವೈದ್ಯರ ಮನವೊಲಿಕೆಗೆ ದೀದಿ ಯತ್ನ

kolkata doctor murder case

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆರ್‌ಜಿ ಕರ್‌ ಮೆಡಿಕಲ್‌ ಕಾಲೇಜಿ(RG Kar College)ನಲ್ಲಿ ನಡೆದ ಟ್ರೈನಿ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣ(Kolkata Doctor Murder) ಖಂಡಿಸಿ ವೈದ್ಯರು ಪ್ರತಿಭಟನೆ(Doctor Protest) ನಡೆಸುತ್ತಿರುವ ಸ್ಥಳಕ್ಕೆ ಇಂದು ಸಿಎಂ ಮಮತಾ ಬ್ಯಾನರ್ಜಿ(Mamata Banerjee) ದಿಢೀರ್‌ ಭೇಟಿ ಕೊಟ್ಟಿದ್ದಾರೆ. ಸ್ವಾಸ್ಥ್ಯ ಭವನದ ಎದುರು ಪ್ರತಿಭಟನೆ ನಡೆಸುತ್ತಿರುವ ವೈದ್ಯರ ಮನವೊಲಿಸಲು ಯತ್ನಿಸಿದ ದೀದಿ, ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದರು.

ನಾನಿಂದು ಸಿಎಂ ಆಗಿ ಇಲ್ಲಿ ಬಂದಿಲ್ಲ. ಬದಲಾಗಿ ನಿಮ್ಮ ಹಿರಿಯ ಸಹೋದರಿಯಾಗಿ ಬಂದಿದ್ದೇನೆ ಎನ್ನುತ್ತಲೇ ವೈದ್ಯರ ಜತೆ ಮಾತು ಆರಂಭಿಸಿದ ದೀದಿ, ನೀವು ನಡು ರಸ್ತೆಯಲ್ಲಿ ಮಳೆ ಬಿಸಿಲನ್ನು ಲೆಕ್ಕಿಸದೇ ಪ್ರತಿಭಟನೆ ನಡೆಸುತ್ತಿದ್ದರೆ ನಾನು ಅಲ್ಲಿ ಅದೆಷ್ಟೋ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ನಾನು ನಿಮ್ಮ ಬೇಡಿಕೆಗಳ ಬಗ್ಗೆ ಅಧ್ಯಯನ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತೇನೆ ಎಂದು ನಿಮಗಿಂದು ನಾನು ಭರವಸೆ ನೀಡುತ್ತಿದ್ದೇನೆ.

ನಿಮ್ಮ ಪ್ರತಿಭಟನೆಯ ಉದ್ದೇಶ ಏನೆಂಬುದು ನನಗೆ ಅರ್ಥ ಆಗಿದೆ. ನಾನೂ ನನ್ನ ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕಿಯಾಗಿದ್ದೆ. ಮತ್ತೆ ಕರ್ತವ್ಯಕ್ಕೆ ಮರಳುವಂತೆ ನಾನು ನಿಮಗೆ ಒತ್ತಾಯಿಸುತ್ತಿದ್ದೇನೆ. ನಿಮ್ಮ ವಿರುದ್ಧ ಯಾವುದೇ ಕ್ರಮ ಜರುಗಿಸದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದಾರೆ. ಇದಾಗ್ಯೂ ವೈದ್ಯರು ತಮ್ಮ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಏನಿದು ಘಟನೆ?

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್‌ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಆಗಸ್ಟ್‌ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು. ಕುತ್ತಿಗೆ ಮುರಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.

ಈ ಸುದ್ದಿಯನ್ನೂ ಓದಿ: Mamata Banerjee : ವೈದ್ಯರ ಅಸಹಾಕಾರ; ರಾಜೀನಾಮೆ ನೀಡಲು ಮುಂದಾದ ಮಮತಾ ಬ್ಯಾನರ್ಜಿ!