Friday, 22nd November 2024

Kolkata Doctor Murder: ʻನಾಳೆಯೊಳಗೆ ಕರ್ತವ್ಯಕ್ಕೆ ಹಾಜರಾಗಿ, ಇಲ್ಲದಿದ್ದರೆ…ʼ- ಪ್ರತಿಭಟನಾ ನಿರತ ವೈದ್ಯರಿಗೆ ಸುಪ್ರೀಂ ಖಡಕ್‌ ವಾರ್ನಿಂಗ್‌

kolkata doctor murder

ನವದೆಹಲಿ: ಕೋಲ್ಕತ್ತಾದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ(Kolkata Doctor Murder)ಕ್ಕೆ ಖಂಡಿಸಿ ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆಯಲ್ಲಿ ತೊಡಗಿರುವ ವೈದ್ಯರಿಗೆ ಸುಪ್ರೀಂಕೋರ್ಟ್‌(Supreme Court) ಖಡಕ್‌ ವಾರ್ನಿಂಗ್‌ ಕೊಟ್ಟಿದೆ. ನಾಳೆಯೊಳಗೆ ವೈದ್ಯರು ಕರ್ತವ್ಯಕ್ಕೆ ಹಾಜರಾಗದೇ ಇದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಸುಪ್ರೀಂಕೋರ್ಟ್‌ ವೈದ್ಯರಿಗೆ ಎಚ್ಚರಿಕೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಇದ್ದ ನ್ಯಾಯಪೀಠ ವಿಚಾರಣೆ ಕೈಗೆತ್ತಿಕೊಂಡಿದ್ದು, ವಿಚಾರಣೆ ಆರಂಭವಾಗುತ್ತಿದ್ದಂತೆ ಪಶ್ಚಿಮ ಬಂಗಾಳ ಪರ ವಕೀಲ ಕಪಿಲ್‌ ಸಿಬಲ್‌ ಆರೋಗ್ಯ ಇಲಾಖೆಯ ಸವಿಸ್ತಾರವಾದ ವರದಿಯೊಂದನ್ನು ಕೋರ್ಟ್‌ಗೆ ಸಲ್ಲಿಸಿದರು. ಅತ್ಯಾಚಾರ ಕೊಲೆ ಪ್ರಕರಣವನ್ನು ಖಂಡಿಸಿ ರಾಜ್ಯವ್ಯಾಪಿ ವೈದ್ಯರು ಕೈಗೊಂಡಿದ್ದ ಪ್ರತಿಭಟನೆಯಿಂದ ಸುಮಾರು 23ಜನ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ. ವೈದ್ಯರ ಪ್ರತಿಭಟನೆಯಿಂದಾಗಿ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಪ್ರಾಣಬಿಟ್ಟಿದ್ದಾರೆ. ಹಲವಾರು ರೋಗಿಗಳು ಚಿಕಿತ್ಸೆಗಾಗಿ ಪರದಾಡಿದ್ಧಾರೆ ಎಂದು ಅವರು ದೂರಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್‌, ವೈದ್ಯರು ಪರಸ್ಪರ ಸ್ಪಂದಿಸಬೇಕು, ವೈದ್ಯರು ಇರುವುದು ರೋಗಿಗಳಿಗೆ ಸೇವೆ ಸಲ್ಲಿಸಲು ಎಂದು ಹೇಳಿದೆ. ಕಳೆದ 28 ದಿನಗಳಿಂದ ವೈದ್ಯರು ಪ್ರತಿಭಟನೆ ನಡೆಸುತ್ತಿರುವುದರಿಂದ ಆರು ಲಕ್ಷಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ ಎಂದು ರಾಜ್ಯ ಹೇಳಿಕೊಂಡಿದೆ. ಹೀಗಾಗಿ ವೈದ್ಯರಿಗೆ ಕರ್ತವ್ಯಕ್ಕೆ ಹಾಜರಾಗಲು ಕೇವಲ ಒಂದೇ ದಿನದ ಅವಕಾಶ ನೀಡಲಾಗಿದೆ. ನಾಳೆಯೊಳಗೆ ಕರ್ತವ್ಯಕ್ಕೆ ಹಾಜರಾಗದೇ ಇದ್ದಲ್ಲಿ ಅವರ ವಿರುದ್ಧ ವರ್ಗಾವಣೆ ಸೇರಿದಂತೆ ಅನೇಕ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಕೋರ್ಟ್‌ ಎಚ್ಚರಿಕೆ ನೀಡಿದೆ. ಇನ್ನು ವೈದ್ಯರು ಸುರಕ್ಷಿತವಾಗಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು ಜಿಲ್ಲಾಧಿಕಾರಿ ಮತ್ತು ಪೊಲೀಸರ ಡ್ಯೂಟಿ ಎಂದು ಹೇಳಿದೆ.

ಏನಿದು ಘಟನೆ?

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್‌ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಆಗಸ್ಟ್‌ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು. ಕುತ್ತಿಗೆ ಮುರಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಇನ್ನು ವೈದ್ಯೆ ಕೊಲೆ ಪ್ರಕರಣದ ತನಿಖೆ ನಡೆಸಲು ಸುಪ್ರೀಂಕೋರ್ಟ್‌ ರಾಷ್ಟ್ರೀಯ ಕಾರ್ಯಪಡೆಯನ್ನು ನೇಮಕ ಮಾಡಿದೆ. ಈ ಕಾರ್ಯಪಡೆಯಲ್ಲಿ ಸರ್ಜನ್‌ ವೈಸ್‌ ಅಡ್ಮಿರಲ್‌ ಆರ್‌.ಕೆ. ಸರಿನ್‌, ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ನ್ಯಾಷನಲ್ ಗ್ಯಾಸ್ಟ್ರೋಲಜಿ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗೇಶ್ವರ ರೆಡ್ಡಿ ಇದ್ದಾರೆ.

ಈ ಸುದ್ದಿಯನ್ನೂ ಓದಿ: Kolkata Murder Case: ಕೋಲ್ಕತ್ತಾ ಆರ್‌.ಜಿ.ಕರ್‌ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ನಿವಾಸದ ಮನೆ ಮೇಲೆ ಇಡಿ ದಾಳಿ