Saturday, 16th November 2024

Kolkata doctors Protest: ವೈದ್ಯರ ಪ್ರತಿಭಟನೆ ವೇಳೆ ಕಾಶ್ಮೀರ ಪ್ರತ್ಯೇಕತೆ ಕೂಗು; ವರದಿ ಕೇಳಿದ ಕೇಂದ್ರ

kolkata Doctor protest

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಟ್ರೈನಿ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣ(Kolkata doctor Murder) ಖಂಡಿಸಿ ಮತ್ತೆ ವೈದ್ಯರು ಆರಂಭಿಸಿರುವ ಪ್ರತಿಭಟನೆ(Kolkata doctors Protest) ವೇಳೆ ಕಾಶ್ಮೀರ ಪ್ರತ್ಯೇಕತೆ ಘೋಷಣೆ ಮೊಳಗಿರುವುದು ಭಾರೀ ಸಂಚಲನ ಮೂಡಿಸಿದೆ. ಇನ್ನು ಈ ಬಗ್ಗೆ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ.

ಕೋಲ್ಕತ್ತಾದ ಆರ್‌ ಜಿ ಕರ್‌ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ ಎದುರು ವೈದ್ಯರು ಪ್ರತಿಭಟನೆ ನಡೆಸುತ್ತಿದ್ದರು. ನೂರಾರು ಜನ ಪ್ರತಿಭಟನೆಗೆ ಸಾಥ್‌ ಕೊಟ್ಟಿದ್ದರು. ಈ ವೇಳೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ಬೇಕು ಎಂಬ ಘೋಷಣೆ ಕೇಳಿಬಂದಿದೆ. ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ಮತ್ತು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅನೇಕ ವೈದ್ಯರು ಪ್ರತಿಭಟನೆ ಮತ್ತು ರ್ಯಾಲಿಯಲ್ಲಿ ನಡೆಸುತ್ತಿದ್ದರು. ಇದರಲ್ಲಿ ಇತರ ಜನರೂ ಭಾಗಿಯಾಗಿದ್ದರು. ಈ ವೇಳೆ ಈ ಘೋಷಣೆ ಕೇಳಿ ಬಂದಿದೆ. ಈ ನಡುವೆ ಸುಮಾರು 15–20 ಮಂದಿ ಪ್ರತಿಭಟನಾಕಾರರು ಪ್ರತ್ಯೇಕ ಕಾಶ್ಮೀರದ ಬಗ್ಗೆ ಧ್ವನಿ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ.

ಇನ್ನು ಘೋಷಣೆ ಕೂಗಿರುವ ಕಿಡಿಗೇಡಿಗಳನ್ನು ಗುಪ್ತಚರ ಇಲಾಖೆ(IB), ಗುರುತಿಸಿದೆ ಎಂದು ಕೇಂದ್ರ ಗೃಹಸಚಿವಾಲಯ ತಿಳಿಸಿದೆ. ವೀಡಿಯೊ ವೈರಲ್ ಆದ ನಂತರ, ಕೋಲ್ಕತ್ತಾ ಪೊಲೀಸರು ಸೆಕ್ಷನ್ 152 (ಭಾರತದ ಸಾರ್ವಭೌಮತೆ, ಏಕತೆ ಅಥವಾ ಸಮಗ್ರತೆಗೆ ಧಕ್ಕೆ ತರುವ ಕ್ರಮಗಳಿಗೆ ಸಂಬಂಧಿಸಿದ) ಮತ್ತು 285 (ಸಾರ್ವಜನಿಕ ರಸ್ತೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಜನರ ಸುರಕ್ಷತೆಗೆ ಸಂಬಂಧಿಸಿದ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್‌ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಆಗಸ್ಟ್‌ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು. ಕುತ್ತಿಗೆ ಮುರಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಟ್ರೈನಿ ವೈದ್ಯೆ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿರುವ ವೈದ್ಯರ ಒತ್ತಾಯಕ್ಕೆ ಕೊನೆಗೂ ಮಮತಾ ಬ್ಯಾನರ್ಜಿ ಸರ್ಕಾರ ಮಣಿದಿದೆ. ವೈದ್ಯರ ಬೇಡಿಕೆಯಂತೆ ಕೋಲ್ಕತ್ತಾ ಪೊಲೀಸ್‌ ಕಮಿಷನರ್‌ ಮತ್ತು ಆರೋಗ್ಯ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಈ ಸುದ್ದಿಯನ್ನೂ ಓದಿ: Kolkata Doctors Protest: ಕೋಲ್ಕತ್ತಾದಲ್ಲಿ ಮತ್ತೆ ವೈದ್ಯರ ಮುಷ್ಕರ; ವಿವಿಧ ಬೇಡಿಕೆಗಳಿಗೆ ಆಗ್ರಹ