ಕೊಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಟೋಲಿಗಂಜ್ ಪ್ರದೇಶದ ಕಸದ ರಾಶಿಯಲ್ಲಿ ಶುಕ್ರವಾರ ಮಹಿಳೆಯೊಬ್ಬರ ಕತ್ತರಿಸಿದ ತಲೆ ದೊರಕಿತ್ತು. ಅದಾದ 24 ಗಂಟೆಗಳ ಒಳಗೆ ಕೊಲೆ ಆರೋಪದ ಮೇಲೆ ಆಕೆಯ ಸೋದರ ಮಾವನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಸೋದರ ಮಾವನನ್ನು ಅತಿಯುರ್ ರೆಹಮಾನ್ ಲಸ್ಕರ್ ಎಂದು ಗುರುತಿಸಲಾಗಿದ್ದು, ಆಕೆಯ ಜೊತೆ ಲಸ್ಕರ್ ಸಂಬಂಧ ಹೊಂದಲು ಬಯಸಿದ್ದ. ಆದರೆ ಮೃತ ಮಹಿಳೆ ಆತನನ್ನು ತಿರಸ್ಕರಿಸಿದ್ದಳು. ಇದರಿಂದ ಕೋಪಗೊಂಡ ಆತ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ಡೈಮಂಡ್ ಹಾರ್ಬರ್‌ನಲ್ಲಿರುವ ಆತನ ಗ್ರಾಮವಾದ ಬಸುಲ್ದಂಗಾದಿಂದ ಆತನನ್ನು ಬಂಧಿಸಿದ್ದಾರೆ.
ಪ್ರಕರಣದ ಬಗ್ಗೆ ಮಾತನಾಡಿದ ಡಿಸಿಪಿ (ದಕ್ಷಿಣ ಉಪನಗರ) ಬಿದಿಶಾ ಕಲಿತಾ ಮಹಿಳೆಯ ಕತ್ತರಿಸಿದ ತಲೆ ಶುಕ್ರವಾರ ಗ್ರಹಾಂ ರಸ್ತೆ ಬಳಿಯ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದ್ದರೆ, ಶನಿವಾರ ರೀಜೆಂಟ್ ಪಾರ್ಕ್ ಪ್ರದೇಶದ ಕೊಳದ ಪಕ್ಕದಲ್ಲಿ ಮುಂಡ ಮತ್ತು ದೇಹದ ಕೆಳಗಿನ ಭಾಗವು ಪತ್ತೆಯಾಗಿತ್ತು ಎಂದು ಹೇಳಿದ್ದಾರೆ.
ಮೃತ ಮಹಿಳೆ ಎರಡು ವರ್ಷದ ಹಿಂದೆ ಪತಿಯಿಂದ ದೂರವಾಗಿದ್ದಳು. ರೀಜೆಂಟ್ ಪಾರ್ಕ್ ಪ್ರದೇಶದಲ್ಲಿ ಮನೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಟಾಲಿಗಂಜ್‌ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸೋದರ ಮಾವನೊಂದಿಗೆ ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದಳು. ಆರೋಪಿ ಲಸ್ಕರ್ ಮಹಿಳೆಯೊಂದಿಗೆ ಸಂಬಂಧ ಹೊಂದಲು ಬಯಸಿದ್ದು, ಆಕೆ ನಿರಾಕರಿಸಿದ್ದಾಳೆ. ಆತನ ಫೋನ್ ಕರೆಗಳಿಗೆ ಆಕೆ ಉತ್ತರಿಸುತ್ತಿರಲಿಲ್ಲ. ಗುರುವಾರ ಸಂಜೆ, ಅವಳು ಕೆಲಸ ಮುಗಿದ ನಂತರ, ಅವನು ಅವಳನ್ನು ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ತನ್ನೊಂದಿಗೆ ಕರೆದುಕೊಂಡು ಹೋಗಿ ಆಕೆಯ ಕತ್ತು ಹಿಸುಕಿದ್ದಾನೆ. ನಂತರ ಆಕೆಯ ಶಿರಚ್ಛೇದ ಮಾಡಿ ದೇಹವನ್ನು ಮೂರು ಭಾಗಗಳಾಗಿ ಎಸೆದಿದ್ದಾನೆ ಎಂದು ಪತ್ರಿಕಾಗೋಷ್ಟಿಯಲ್ಲಿ ಡಿಸಿಪಿ ತಿಳಿಸಿದ್ದಾರೆ.
ಮಹಿಳೆಗೆ ಸುಮಾರು 35-40 ವರ್ಷ ವಯಸ್ಸಾಗಿದ್ದು, ಆರೋಪಿ ಒಬ್ಬನೇ ಈ ಕೃತ್ಯ ಮಾಡಿದ್ದಾನೆಯೇ ಇಲ್ಲವೇ ಇತರರು ಭಾಗಿಯಾಗಿದ್ದಾರೆಯೇ ಎಂದು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಕೋಲ್ಕತ್ತಾದ ಗಾರ್ಫಾ ಪ್ರದೇಶದ ಕಟ್ಟಡವೊಂದರ ಮೆಟ್ಟಿಲಿನಿಂದ ಮಹಿಳೆಯ ಶವವನ್ನು ನವೆಂಬರ್ 2ರಂದು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶವ ಸಿಕ್ಕ ನಂತರ ಮಹಿಳೆಯ ಕುಟುಂಬಸ್ಥರು ಆಕೆಯ ಸಹೋದರಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಸಹೋದರಿಯನ್ನು ಪೊಲೀಸರು ಬಂಧಿಸಿದ್ದಾರೆ.
37 ವರ್ಷದ ಮಹಿಳೆ ತನ್ನ ಅಕ್ಕನೊಂದಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಳು. ಕೊಲೆಯಾದ ಹಿಂದಿನ ದಿನ ರಾತ್ರಿ ಅವರೆಲ್ಲರೂ ಮದ್ಯ ಸೇವಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಗಾರ್ಫಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ ಮೆಟ್ಟಿಲು ಹತ್ತುವಾಗ ಆಕೆ ಬಿದ್ದು ಗಾಯಗೊಡಿದ್ದಾಳೆ ಎಂದು ಆಕೆಯ ಸಹೋದರಿ ತಿಳಿಸಿದ್ದಳು. ಆದರೆ ಪೊಲೀಸರಿಗೆ ಅನುಮಾನ ಬಂದು ಆಕೆಯನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ಸುದ್ದಿಯನ್ನೂ ಓದಿ : Kolkata Horror: ಕೋಲ್ಕತ್ತಾ ವೈದ್ಯೆ ಕೊಲೆ ಹಿಂದೆ ಇದ್ಯಾ ಪೊಲೀಸ್ ಕಮಿಷನರ್ ಕೈವಾಡ? ಮಾಧ್ಯಮದೆದುರು ಆರೋಪಿ ಕಿರುಚಾಡಿದ್ದೇಕೆ? ವಿಡಿಯೊ ವೈರಲ್