Thursday, 12th December 2024

ಪ್ರಚೋದನಕಾರಿ ಭಾಷಣ: ವಿಚಾರಣೆ ಎದುರಿಸಿದ ಮಿಥುನ್ ಚಕ್ರವರ್ತಿ

ಕೋಲ್ಕತಾ: ನಟ ಹಾಗೂ ಬಿಜೆಪಿ ಮುಖಂಡ ಮಿಥುನ್ ಚಕ್ರವರ್ತಿ ಅವರನ್ನು ಕೋಲ್ಕತಾ ಪೊಲೀಸರು ಬುಧವಾರ ವಿಚಾರಣೆಗೆ ಒಳಪಡಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ನಡೆಸಿದ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಈ ಬೆಳವಣಿಗೆ ನಡೆದಿದೆ. ಪುಣೆಯಲ್ಲಿರುವ ಮಿಥುನ್ ಚಕ್ರವರ್ತಿ ಅವರನ್ನು ಉತ್ತರ ಕೊಲ್ಕೋತ್ತಾದ ಮಣಿಕ್ತಲಾ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ್ದಾರೆ.

ಕಳೆದ ಏಪ್ರಿಲ್- ಮೇ ತಿಂಗಳಲ್ಲಿ ಎಂಟು ಹಂತಗಳವರೆಗೆ ನಡೆದ ಚುನಾವಣೆಯಲ್ಲಿ ಮಿಥುನ್ ಅವರು ಬಿಜೆಪಿಯ ತಾರಾ ಪ್ರಚಾರಕರಲ್ಲಿ ಒಬ್ಬರಾಗಿದ್ದರು. ಪ್ರಚಾರದ ವೇಳೆ ನೀಡಿದ್ದ ಹೇಳಿಕೆಯು ಚುನಾವಣೆ ಬಳಿಕದ ಹಿಂಸಾಚಾರದಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದು ಆರೋಪಿಸಲಾಗಿತ್ತು. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಮಿಥುನ್ ಚಕ್ರವರ್ತಿ ಅವರು ಕೊಲ್ಕೊತ್ತಾ ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ತನಿಖಾಧಿಕಾರಿಯೊಬ್ಬರು ಆನ್‌ಲೈನ್ ಮೂಲಕ ವಿಚಾರಣೆ ನಡೆಸಬೇಕು ಎಂದು ಕೋರ್ಟ್ ಸೂಚನೆ ನೀಡಿತ್ತು.

ರ‍್ಯಾಲಿಯಲ್ಲಿ ‘ನಾನು ನಾಗರಹಾವು. ಒಮ್ಮೆ ಕಚ್ಚಿದರೆ ಸಾಕು’. ನಿನಗೆ ಇಲ್ಲಿ ಹೊಡೆದರೆ, ನಿನ್ನ ದೇಹ ಚಿತಾಗಾರದಲ್ಲಿ ಹೋಗಿ ಬೀಳುತ್ತದೆ’ ಎಂಬ ಸಿನಿಮಾ ಸಂಭಾಷಣೆ ಹೇಳಿದ್ದರು.