Saturday, 14th December 2024

Kolkata rape-murder case : ಆಸ್ಪತ್ರೆಗಳಿಗೆ ಕೊಟ್ಟಿರುವ ಭದ್ರತೆಗಳ ವರದಿ ಕೊಡಿ; ರಾಜ್ಯ ಸರ್ಕಾರಗಳಿಗೆ ಕೇಂದ್ರದ ನಿರ್ದೇಶನ

Kolkata rape-murder case

ನವದೆಹಲಿ: ಆಸ್ಪತ್ರೆಗಳಲ್ಲಿ ಭದ್ರತೆ ಖಚಿತಪಡಿಸುವ ಜತೆಗೆ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ  ಸೆಪ್ಟೆಂಬರ್ 10 ರೊಳಗೆ ತೆಗೆದುಕೊಂಡ ಕ್ರಮದ ವರದಿ ನೀಡಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ ಬುಧವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ಕಳುಹಿಸಿದ್ದಾರೆ. ದೇಶಾದ್ಯಂತ ವೈದ್ಯಕೀಯ ವೃತ್ತಿಪರರ ಸುರಕ್ಷತೆ ಖಚಿತಪಡಿಸಿಕೊಳ್ಳಲು ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಈ ಸೂಚನೆ ಕಳುಹಿಸಲಾಗಿದೆ. ಕೋಲ್ಕೊತಾದ ಆರ್‌ಜಿ ಕಾರ್‌ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ (Kolkata rape-murder case) ಬಳಿಕ ಉಂಟಾದ ದೊಂಬಿಯಲ್ಲಿ ಆಸ್ಪತ್ರೆ ಮೇಲೆ ದಾಳಿ ನಡೆದಿತ್ತು. ಈ ವೇಳೆ ಸುರಕ್ಷತೆ ಹೆಚ್ಚಿಸಲು ವೈದ್ಯರು ಪ್ರತಿಭಟನೆ ಆರಂಭಿಸಿದ್ದರು.ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಅವರು ಸುರಕ್ಷತೆಯ ಭರವಸೆ ನೀಡಿದ ಅಧಿಕಾರಿಗಳಿಗೆ  ಕೃತಜ್ಞತೆ ಸಲ್ಲಿಸಿದ್ದಾರೆ. ಆಗಸ್ಟ್ 28 ರಂದು ನಡೆದ ಕಾನ್ಫರೆನ್ಸ್‌ನಲ್ಲಿ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಸುರಕ್ಷಿತ ಕೆಲಸದ ವಾತಾವರಣವನ್ನು ಒದಗಿಸುವ ಬಗ್ಗೆ ಚರ್ಚಿಸಲಾಗಿತ್ತು. ಆ ಬಗ್ಗೆ ಉಲ್ಲೇಖಿಸಿದ ಚಂದ್ರ ಅವರು ಭರವಸೆ ನೀಡಿದ ಅಧಿಕಾರಿಗಳಿಗೆ ಧನ್ಯವಾದ ಹೇಳಿದ್ದಾರೆ.

ಹೆಚ್ಚಿನ ಅಪಾಯ ಹೊಂದಿರುವ ವೈದ್ಯಕೀಯ ಸಂಸ್ಥೆಗಳನ್ನು ಗುರುತಿಸುವುದು, ಭದ್ರತಾ ಲೆಕ್ಕಪರಿಶೋಧನೆ, ಸಿಸಿಟಿವಿ ಕಣ್ಗಾವಲು, ಆ ಸಂಸ್ಥೆಗಳ ಹಿನ್ನೆಲೆ ಪರಿಶೀಲನೆ ಸೇರಿದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆದ್ಯತೆ ನೀಡಬೇಕಾಗಿರುವ ಹಲವಾರು ಸುಧಾರಣಾ ಕ್ರಮಗಳನ್ನು ಆರೋಗ್ಯ ಕಾರ್ಯದರ್ಶಿ ತಮ್ಮ ನಿರ್ದೇಶನದಲ್ಲಿ ವಿವರಿಸಿದ್ದಾರೆ.  ಹೆಚ್ಚಿನ ರೋಗಿಗಳನ್ನು ಹೊಂದಿರುವ  ಆಸ್ಪತ್ರೆಗಳನ್ನು ಗುರುತಿಸಲು ಮತ್ತು ಭದ್ರತಾ ಹೆಚ್ಚಿಸಲು  ಆದ್ಯತೆಯ ಸಂಸ್ಥೆಗಳಾಗಿ ವರ್ಗೀಕರಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅವರು ಹೇಳಿದ್ದಾರೆ. ಆಸ್ಪತ್ರೆಗಳಲ್ಲಿ ಅಸ್ತಿತ್ವದಲ್ಲಿರುವ ಭದ್ರತಾ ಕ್ರಮಗಳನ್ನು ಸುಧಾರಿಸಲು ಸ್ಥಳೀಯ ಆರೋಗ್ಯ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚಿಸಬೇಕು. ನಿಯಮಿತವಾಗಿ ಭದ್ರತಾ ಪರಿಶೀಲನೆಗಳನ್ನು ನಡೆಸಬೇಕೆಂದು ಆರೋಗ್ಯ ಕಾರ್ಯದರ್ಶಿ ಶಿಫಾರಸು ಮಾಡಿದ್ದಾರೆ.

ತುರ್ತು ಕೊಠಡಿಗಳು, ಟ್ರಯಜ್ ಪ್ರದೇಶಗಳು, ತೀವ್ರ ನಿಗಾ ಘಟಕಗಳು (ಐಸಿಯು) ಮತ್ತು ಹೆರಿಗೆ ಕೊಠಡಿಗಳಂತಹ ಭದ್ರತಾ ಉಲ್ಲಂಘನೆಗಳಿಗೆ ಅತಿ ಹೆಚ್ಚು ಗುರಿಯಾಗುವ ಪ್ರದೇಶಗಳ ಕಡೆಗೆ ವಿಶೇಷ ಗಮನ ನೀಡಬೇಕು ಎಂದು ಅಪೂರ್ವ ಅವರು ಸಲಹೆ ನೀಡಿದ್ದಾರೆ. ತೀವ್ರ ದುಃಖದ ಸಂದರ್ಭಗಳನ್ನು ನಿಭಾಯಿಸಲು ಎಲ್ಲಾ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸರಿಯಾದ ತರಬೇತಿ ನೀಡಬೇಕು ಎಂಬುದಾಗಿಯೂ ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Defectors MLA : ಪಕ್ಷಾಂತರ ಮಾಡುವ ಶಾಸಕರಿಗೆ ಇನ್ನು ಮುಂದೆ ಪೆನ್ಷನ್‌ ಇಲ್ಲ, ಹೊಸ ಕಾನೂನು ಜಾರಿ

ಆಗಸ್ಟ್ 23ರಂದು ನೀಡಿದ ಕಾನ್ಫರೆನ್ಸ್‌ನಲ್ಲಿ ನೀಡಿದ ಸಲಹೆಗಳಿಗೆ ಅನುಗುಣವಾಗಿ ಹಲವಾರು ರಾಜ್ಯಗಳು ಈಗಾಗಲೇ ಕ್ರಮಗಳನ್ನು ಪ್ರಾರಂಭಿಸಿವೆ ಎಂದು ಚಂದ್ರ ಹೇಳಿದರು. ಕೆಲವು ರಾಜ್ಯಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳು  ಶಿಫಾರಸುಗಳನ್ನು ಮೀರಿ ಭದ್ರತೆ ಕಲ್ಪಿಸಲು ಹೆಚ್ಚುವರಿ ಕ್ರಮಗಳನ್ನು ಜಾರಿಗೆ ತಂದಿವೆ ಎಂದು ಅವರು ಹೇಳಿದರು.