Sunday, 15th December 2024

ಮುಕುಲ್ ರಾಯ್ ಪತ್ನಿ ಕೃಷ್ಣಾ ರಾಯ್ ನಿಧನ

ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮುಕುಲ್ ರಾಯ್ ಪತ್ನಿ ಮಂಗಳವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರುವುದಾಗಿ ವರದಿ ತಿಳಿಸಿದೆ.

ಮುಕುಲ್ ರಾಯ್ ಪತ್ನಿ ಕೃಷ್ಣಾ ರಾಯ್ ಹೃದಯ ಸ್ತಂಭನದಿಂದ ಮೃತಪಟ್ಟಿದ್ದು, ಪಾರ್ಥೀವ ಶರೀರ ವನ್ನು ಬುಧವಾರ ಕೋಲ್ಕತಾಗೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ. ಕೃಷ್ಣಾ ರಾಯ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೃಷ್ಣಾ ರಾಯ್ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಅವರ ನಿಧನ ತೀವ್ರ ಆಘಾತವನ್ನು ತಂದಿದೆ.

ಮುಕುಲ್ ರಾಯ್ , ಪುತ್ರ ಸುಬ್ರಾಂಗುಶ್ ರಾಯ್ ಮತ್ತು ಕುಟುಂಬ ಸದಸ್ಯರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣಾ ರಾಯ್ ಅವರನ್ನು ಇತ್ತೀಚೆಗಷ್ಟೇ ಕಿಡ್ನಿ ಕಸಿಗಾಗಿ ಚೆನ್ನೈನ ಆಸ್ಪತ್ರೆಗೆ ಏರ್ ಆಯಂಬುಲೆನ್ಸ್ ಮೂಲಕ ಕರೆದೊಯ್ದು ದಾಖಲಿಸಲಾಗಿತ್ತು ಎಂದು ವರದಿ ತಿಳಿಸಿದೆ.