ಲಖನೌ: ಕುಂಭ ಮೇಳ (Kumbh Mela) ಎಂಬುದು ಹೆಚ್ಚು ಜನ ಸೇರುವ ವಿಶ್ವದ ಅತೀ ದೊಡ್ಡ ಧಾರ್ಮಿಕ ಸಂಭ್ರಮಾಚರಣೆ (Religious Festival) ಎನಿಸಿಕೊಂಡಿದೆ. ಈ ಬಾರಿ 2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ (Kumbh Mela 2025) ನಡೆಯಲಿದೆ. ಪ್ರತೀ 12 ವರ್ಷಗಳಿಗೊಮ್ಮೆ ಈ ಉತ್ಸವವು ಧಾರ್ಮಿಕ ಭಕ್ತಿ ಭಾವಗಳೊಂದಿಗೆ (spiritual pilgrimage) ಸಂಪನ್ನಗೊಳ್ಳುತ್ತದೆ ಮತ್ತು ಈ ಕುಂಭಮೇಳವನ್ನು ಕಣ್ತುಂಬಿಕೊಂಡು ಪುಣ್ಯಸ್ನಾನವನ್ನು ಕೈಗೊಳ್ಳಲು ದೇಶದ ವಿವಿಧ ಭಾಗಗಳಿಂದ ಹಿಂದೂ ಆಸ್ತಿಕ ಬಾಂಧವರು ಇಲ್ಲಿಗೆ ಆಗಮಿಸುತ್ತಾರೆ ಮತ್ತು ಈ ಕುಂಭಮೇಳದಲ್ಲಿ ನಡೆಯುವ ಕುತೂಹಲಕಾರಿ ವಿಷಯಗಳನ್ನು ಸಂಗ್ರಹಿಸಿ ಇದಕ್ಕೆ ಸಾಕ್ಷೀಭೂತರಾಗಲು ಸಾವಿರಾರು ವಿದೇಶಿಯರೂ ಇಲ್ಲಿಗೆ ಆಗಮಿಸುತ್ತಾರೆ.
ಈ ಬಾರಿ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭಮೇಳದಲ್ಲಿ (Kumbh Mela 2025) ಭಾಗವಹಿಸಿ, ಗಂಗಾ (Ganga) – ಯಮುನಾ (Yamuna) – ಸರಸ್ವತಿ (Saraswati) ನದಿಗಳ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಗೈದು ಪುನೀತರಾಗಲು ಲಕ್ಷಾಂತರ ಭಕ್ತರು ತುದಿಗಾಲಲ್ಲಿ ಕಾಯುತ್ತಿದ್ದಾರೆ.
ಈ ಮಹಾ ಕುಂಭಮೇಳದಲ್ಲಿ (Kumbh Mela 2025) ಕೋಟ್ಯಂತರ ಜನರು ಸೇರುವುದರಿಂದ ಮತ್ತು ಸುದೀರ್ಘ ದಿನ ಈ ಮೇಳ ನಡೆಯುವುದರಿಂದ ಪ್ರಯಾಗ್‌ರಾಜ್ನ ಭದ್ರತೆಯನ್ನು ಕೈಗೊಳ್ಳುವುದೇ ಆಡಳಿತ ಯಂತ್ರಕ್ಕೆ ಒಂದು ಸವಾಲಿನ ವಿಷಯ. ಹೀಗಾಗಿ ಈ ಬಾರಿ ಮಹಾಕುಂಭಮೇಳದಲ್ಲಿ ಭಕ್ತರ ಸುರಕ್ಷತೆಗಾಗಿ ಮತ್ತು ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದಂತೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು ಸುರಕ್ಷತೆಗಾಗಿ ಆಧುನಿಕ ತಂತ್ರಜ್ಞಾನದ (Modern Technology) ಮೊರೆ ಹೋಗಿದೆ.
ಈ ಬಾರಿಯ ಕುಂಭ ಮೇಳದಲ್ಲಿ ಸುಮಾರು 45 ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇದೆ. ಹಾಗಾಗಿ ಸುರಕ್ಷತಾ ವಿಧಾನದಲ್ಲಿ ಜಿಪಿಎಸ್ (GPS), ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (artificial intelligence) ಮತ್ತು ಪ್ರಸಾರ ತಂತ್ರಜ್ಞಾನಗಳನ್ನು (streaming technology) ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಪುರ್ವ ತಯಾರಿಗಳು ಭರದಿಂದ ನಡೆಯುತ್ತಿದೆ.
ಜನಸಂದಣಿ ನಿಯಂತ್ರಣಕ್ಕೆ AI ಮೊರೆ
ಕುಂಭ ಮೇಳ ನಡೆಯುವ ಸ್ಥಳದಲ್ಲಿ ಭಕ್ತರ ನೂಕು ನುಗ್ಗಲನ್ನು ತಡೆಯುವುದಕ್ಕಾಗಿ ಯುಪಿ ಸರಕಾರವು ಎಐ (AI) ಆಧಾರಿತ ನಿಗಾ ವ್ಯವಸ್ಥೆಯ ಮೊರೆ ಹೋಗಿದೆ. ಸಮಾರು 2,700 ಸಿಸಿ ಟಿವಿ ಕ್ಯಾಮೆರಾಗಳನ್ನು (CCTV Camera) ಅಳವಡಿಸಲಾಗಿದ್ದು, ಇವುಗಳಲ್ಲಿ 328 ಎಐ-ಚಾಲಿತ ಕ್ಯಾಮೆರಾಗಳಾಗಿವೆ. ಈ ಕ್ಯಾಮೆರಾ ಕಣ್ಣುಗಳ ಮೂಲಕ ಕುಂಭ ಮೇಳ ನಡೆಯುವ ಪ್ರದೇಶದುದ್ದಕ್ಕೂ 24X7 ಕಟ್ಟುನಿಟ್ಟಿನ ನಿಗಾ ಇರಲಿದೆ.
ಈ ಕ್ಯಾಮೆರಾಗಳ ವಿಶೇಷತೆಯೆಂದರೆ, ಇವುಗಳು ಜನರ ನೂಕುನುಗ್ಗಲನ್ನು ಪತ್ತೆ ಹಚ್ಚುವ ಸಾಮರ್ಥ್ಯವನ್ನು ಹೊಂದಿದ್ದು, ಹೀಗಾದಲ್ಲಿ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಿದೆ. ಕುಂಭ ಮೇಳ ನಡೆಯುವ ಸ್ಥಳದಲ್ಲಿ ಯಾರಾದರೂ ತಪ್ಪಿಸಿಕೊಂಡರೆ ಅವರನ್ನು ಪತ್ತೆ ಹಚ್ಚುವ ತಂತ್ರಜ್ಞಾನ ಇಲ್ಲಿದೆ. ಮಾನವ ಚಲನೆಯನ್ನು ಕಂಡುಕೊಂಡು ಪರಿಸ್ಥಿತಿಯನ್ನು ಸುಧಾರಿಸುವ ಸಾಮರ್ಥ್ಯವನ್ನೂ ಈ ವ್ಯವಸ್ಥೆ ಹೊಂದಿದೆ.
ಇವೆಲ್ಲಕ್ಕಿಂತ ಮುಖ್ಯವಾಗಿ ಡಿಜಿಟಲ್ ಮಾದರಿಯ ಕಾಣೆ ಮತ್ತು ಪತ್ತೆ ವ್ಯವಸ್ಥೆಯು ನಾಪತ್ತೆಯಾದ ವ್ಯಕ್ತಿಗಳ ಮಾಹಿತಿಯನ್ನು ತಕ್ಷಣವೇ ನೋಂದಾಯಿಸಿಕೊಳ್ಳುವ ಮತ್ತು ಎಐ ತಂತ್ರಜ್ಞಾನದ ಮೂಲಕ ಅವರ ಇರುವಿಕೆಯನ್ನು ಪತ್ತೆಹಚ್ಚುವ ಅನುಕೂಲವನ್ನೂ ಹೊಂದಿದೆ. ಇನ್ನು ಕಾಣೆಯಾದ ವ್ಯಕ್ತಿಗಳ ಮಾಹಿತಿಯನ್ನು ತಕ್ಷಣವೇ ಸಾಮಾಜಿಕ ಜಾಲತಾಣಗಳಿಗೆ ರವಾನಿಸುವ ನೆಟ್‌ವರ್ಕ್ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಡಿಜಿಟಲ್ ನ್ಯಾವಿಗೇಷನ್ ಮತ್ತು ಮಾಹಿತಿ ವ್ಯವಸ್ಥೆ
ಯುಪಿ ಸರ್ಕಾರವು ಕುಂಭ್ ಸಹಾಯಕ್ ಹೆಸರಿನ ಆ್ಯಪ್ (Kumbh Sahayak app) ಅನ್ನು ಬಿಡುಗಡೆಗೊಳಿಸಿದ್ದು, ಇದರ ಸಹಾಯದಿಂದ ಕುಂಭ ಮೇಳದ ಸ್ಥಳದಲ್ಲಿ ನಡೆಯುವ ಎಲ್ಲ ಚಟುವಟಿಕೆಗಳ ಮಾಹಿತಿಯನ್ನು ನೀವು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಈ ಆ್ಯಪ್‌ನಲ್ಲಿ ಕುಂಭ ಮೇಳದ ಸಂಪ್ರದಾಯಗಳ ಬಗ್ಗೆಯೂ ವಿವರ ಸಿಗಲಿದೆ.
ಘಾಟ್‌ಗಳು, ಅಖಾಡಗಳು ಮತ್ತು ಇನ್ನಿತರ ಧಾರ್ಮಿಕ ಸ್ಥಳಗಳ ನಿಖರ ಸ್ಥಳ ಮಾಹಿತಿ ನಿಮಗೆ ದೊರೆಯಲಿದೆ. ಈ ಅಧಿಕೃತ ಆ್ಯಪ್‌ನಲ್ಲಿ ಕುಂಭ ಮೇಳ ಸ್ಥಳದಲ್ಲಿನ ಎಲ್ಲ ಕ್ಯಾಂಪ್‌ಗಳ 3ಡಿ ಚಿತ್ರ ಇರುವುದರಿಂದ ಭಕ್ತರಿಗೆ ಮತ್ತು ಪ್ರವಾಸಿಗರಿಗೆ ತಮಗೆ ಬೇಕಾದಲ್ಲಿಗೆ ಗುರುತು ಮಾಡಿಕೊಂಡು ಸಾಗಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: IND vs AUS: ಫಾಲೋಆನ್ ತಪ್ಪಿದ ಬೆನ್ನಲ್ಲೇ ಕೋಚ್ ಗಂಭೀರ್, ಕೊಹ್ಲಿ ಸಂಭ್ರಮಾಚರಣೆ; ಇಲ್ಲಿದೆ ವಿಡಿಯೊ
ಸಾಮಾಜಿಕ ಜಾಲತಾಣಗಳ ಮೂಲಕ ವಿಸ್ತೃತ ಸಂವಹನ ವ್ಯವಸ್ಥೆ
ಈ ಕುಂಭ ಮೇಳದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ವರ್ಗದವರ ನಡುವೆ ಮತ್ತು ಇಲ್ಲಿಗೆ ಭೇಟಿ ನಿಡುವ ಜನರ ನಡುವೆ ಉತ್ತಮ ಸಂವಹಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಯೋಜನೆ ಮತ್ತು ಸಿದ್ಧತೆಗಳನ್ನು ರೂಪಿಸಿಕೊಳ್ಳಲಾಗಿದೆ. ಕುಂಭಮೇಳದಲ್ಲಿನ ಕಾರ್ಯಕ್ರಮಗಳು ಮತ್ತು ಸೇವೆಗಳ ರಿಯಲ್ ಟೈಮ್ ಅಪ್ ಡೇಟ್, ಕಳೆದು ಹೋದ ವ್ಯಕ್ತಿಗಳ ಬಗ್ಗೆ ಮಾಹಿತಿ, ಆಡಳಿತ ಯಂತ್ರ ಮತ್ತು ನಾಗರಿಕರ ನಡುವೆ ವೇಗದ ಸಂವಹನಕ್ಕಾಗಿ ಇದರ ಬಳಕೆ ಪರಿಣಾಮಕಾರಿಯಾಗಿರಲಿದೆ.
ವಿಶ್ವಾದ್ಯಂತ ಕುಂಭಮೇಳದ ನೇರ ಪ್ರಸಾರ
ನಿಮಗೆ ಈ ಬಾರಿಯ ಕುಂಭಮೇಳದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇದ್ದಲ್ಲಿ ಟೆನ್ಷನ್ ಮಾಡ್ಬೇಡಿ! ನೀವು ಇರುವ ಕಡೆಯಲ್ಲೇ ಈ ವಿಶ್ವವಿಖ್ಯಾತ ಕುಂಭ ಮೇಳವನ್ನು ಕಣ್ತುಂಬಿಕೊಳ್ಳಬಹುದು. ಗೂಗಲ್ ನ್ಯಾವಿಗೇಷನ್ ಸಹಯೋಗದಲ್ಲಿ ಈ ಮಹಾ ಕುಂಭಮೇಳದ ರಿಯಲ್ ಟೈಮ್ ಕಾರ್ಯಕ್ರಮಗಳನ್ನು ನೇರಪ್ರಸಾರದಲ್ಲಿ ನೀವು ವೀಕ್ಷಿಸಬಹುದು.
ಈ ರೀತಿಯಾಗಿ, ಈ ಸಂದರ್ಭದಲ್ಲಿ ಲಭ್ಯವಿರುವ ಎಲ್ಲ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು 2025ರ ಮಹಾ ಕುಂಭ ಮೇಳವನ್ನು ತಂತ್ರಜ್ಞಾನದೊಂದಿಗೆ ಬೆಸೆಯುವ ಮೂಲಕ ಸುರಕ್ಷಿತ ಮತ್ತು ಜಗದಗಲ ಎಲ್ಲರಿಗೂ ವೀಕ್ಷಣೆ ಸಾಧ್ಯವನ್ನಾಗಿಸಲು ಉತ್ತರಪ್ರದೇಶ ಸರ್ಕಾರ ಮತ್ತು ಸ್ಥಳೀಯಾಡಳಿತವು ಹಗಲಿರುಳು ಸಿದ್ಧತೆ ನಡೆಸುತ್ತಿದೆ.