Friday, 13th December 2024

ಯುವತಿ ಹತ್ಯೆ ಪ್ರಕರಣ: ಪ್ರಿಯಕರ, ಸ್ನೇಹಿತನ ಬಂಧನ

ಮುಂಬೈ: ಮುಂಬಯಿ ಸಾಂತಾಕ್ರೂಜ್‌ನಿಂದ ನಾಪತ್ತೆಯಾಗಿದ್ದ 29 ವರ್ಷದ ಯುವತಿಯ ಹತ್ಯೆ ಮಾಡಿರುವ ಪ್ರಕರಣದ ರಹಸ್ಯ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಆಕೆಯ ಪ್ರಿಯಕರ ಮತ್ತು ಸಹಚರನನ್ನು ವಿಲೇಪಾರ್ಲೆ ಯಿಂದ ಪೊಲೀಸರು ಬಂಧಿಸಿದ್ದಾರೆ.

ಮೃತ ಯುವತಿ ಪಿಂಕಿ ಕ್ಲಿಫರ್ಡ್‌ ಮಿಸ್ಕ್ವಿತ್ತಾ ಎಂದು ಗುರುತಿಸಲಾಗಿದ್ದು, ಆರೋಪಿ ಜಿಕೋ ಅನ್ಸಲಿಮ್‌ ಮಿಸ್ಕಿತ್‌ (27) ಮತ್ತು ಆತನ ಸ್ನೇಹಿತ ಕುಮಾರ್‌ ಎಂದು ಗುರುತಿಸಲಾಗಿದೆ.

ಆರೋಪಿ ಪ್ರಿಯಕರ ತಪ್ಪೊಪ್ಪಿಕೊಂಡಿದ್ದು, ದುಬಾರಿ ಉಡುಗೊರೆಗಳನ್ನು ತೆಗೆದುಕೊಳ್ಳುವಂತೆ ಗೆಳತಿ ನಿರಂತರ ವಾಗಿ ಒತ್ತಾಯಿಸುತ್ತಿದ್ದಳು. ಬೇಸತ್ತು ಆಕೆಯನ್ನು ಹತ್ಯೆಗೈದಿರುವುದಾಗಿ ಹೇಳಿದ್ದಾನೆ. ಆರೋಪಿಗಳನ್ನು ಪಾಲ್ಘರ್‌ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಡಿ. 24ರಂದು ಪಿಂಕಿ ಸಾಂತಾಕ್ರೂಜ್‌ ನಿಂದ ನಾಪತ್ತೆಯಾಗಿದ್ದರು. ಸಾಂತಾಕ್ರೂಜ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ಆರೋಪಿ ಜಿಕೋನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮೊದಲಿಗೆ ಆತ ಅಸ್ಪಷ್ಟ ಉತ್ತರ ನೀಡಿದ್ದ. ಅನುಮಾನಗೊಂಡ ಪೊಲೀಸರು ಆತನಿಗೆ ರೇಖಾಚಿತ್ರಗಳನ್ನು ತೋರಿಸಿದಾಗ ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆರೋಪಿ ಜಿಕೋ ಮತ್ತೂಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದ. ಮತ್ತೂಂದೆಡೆ ಪಿಂಕಿ ದುಬಾರಿ ಉಡುಗೊರೆಗಳಿಗೆ ನಿರಂತರ ಬೇಡಿಕೆಯಿಡುತ್ತಿದ್ದಳು.

ಆರೋಪಿಗಳು ಪಿಂಕಿಯನ್ನು ಪಾಲ್ಘರ್‌ಗೆ ದ್ವಿಚಕ್ರ ವಾಹನದಲ್ಲಿ ಕರೆದೊಯ್ದಿದ್ದಾರೆ. ಬಳಿಕ ಡಿ. 24ರಂದು ಜೆಟ್ಟಿ ಬಳಿಯ ಗುಡ್ಡಗಾಡು ಪ್ರದೇಶಕ್ಕೆ ಪಿಂಕಿಯನ್ನು ಕರೆದೊಯ್ದರು. ಈ ಸಂದರ್ಭ ಆರೋಪಿಗಳು ರಾತ್ರಿ ವೇಳೆ ಆಕೆಯನ್ನು ಗುಡ್ಡದಿಂದ ಕೆಳಗೆ ತಳ್ಳಿದರು. ಕಮರಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆಕೆ ಮೃತಪಟ್ಟಿದ್ದಾಳೆ.